ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ದಿನಗಳ ಪ್ರವಾಸಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಹಿಂಸಾಚಾರ ಪೀಡಿತ ಮಣಿಪುರಕ್ಕೆ ತೆರಳಿದ್ದಾರೆ. ಈ ವೇಳೆ ಬೆಂಗಾವಲು ಪಡೆಗಳೊಂದಿಗೆ ರಾಜಧಾನಿ ಇಂಫಾಲ್ನಿಂದ ಹಿಂಸಾಚಾರ ನಡೆದ ಚುರಾಚಂದಪುರ್ ಕಡೆಗೆ ಹೊರಟ ರಾಹುಲ್ರನ್ನು ಮಾರ್ಗಮಧ್ಯೆಯೇ ಮಣಿಪುರ ಪೊಲೀಸರು ತಡೆದಿದ್ದಾರೆ.
ಮಣಿಪುರಕ್ಕೆ ಇಂದು ಭೇಟಿ ನೀಡಿದ್ದ ರಾಹುಲ್ ಗಾಂಧಿಯವರು ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿ, ಸಂಕಷ್ಟಕ್ಕೊಳಗಾದ ಜನರೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದರು. ಆದರೆ ಇಂಫಾಲದಿಂದ 20 ಕಿಲೋಮೀಟರ್ ದೂರದಲ್ಲಿರುವ ಬಿಷ್ಣುಪುರದಲ್ಲಿ ಮಣಿಪುರ ಪೊಲೀಸರು ಅವರನ್ನು ತಡೆದಿದ್ದಾರೆ.
ಬೆಂಗಾವಲು ತಡೆದಿದ್ದಕ್ಕೆ ಮಣಿಪುರ ಪೊಲೀಸರು ಸ್ಪಷ್ಟನೆ ನೀಡಿದ್ದು, ಮುಂದೆ ಹೋಗಲು ರಾಹುಲ್ ಗಾಂಧಿ ಅವರಿಗೆ ಅನುಮತಿ ನೀಡಿಲು ಸಾಧ್ಯವಿಲ್ಲ. ನಮಗೆ ಅವರ ಭದ್ರತೆಯ ಬಗ್ಗೆ ಆತಂಕವಿದೆ. ಸ್ಥಳದಲ್ಲಿ ಈಗಲೂ ಪರಿಸ್ಥಿತಿ ಬಿಗಡಾಯಿಸಿದೆ. ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನವನ್ನು ಚಂದ್‌ಪುರದಲ್ಲಿ ದಾಳಿಕೋರರದ್ದು ಎಂದು ತಪ್ಪಾಗಿ ಗ್ರಹಿಸಬಹುದು ಎಂದು ಬಿಷ್ಣುಪುರ್ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಮಣಿಪುರದಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿ ವಿಚಾರವಾಗಿ ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ ಹಿಂಸಾಚಾರ ನಡೆಯುತ್ತಿದೆ. ಇದುವರೆಗೆ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.