ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲದಲ್ಲಿ ಮತ್ತೊಂದು ಚಿರತೆ ಬೋನಿಗೆ ಸಿಕ್ಕಿಬಿದ್ದಿದೆ. ಪಾದಚಾರಿ ಮಾರ್ಗದ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಹಾಕಲಾಗಿದ್ದ ಬೋನಿನಲ್ಲಿ ಚಿರತೆ ಸಿಕ್ಕಿಬಿದ್ದಿದೆ ಎಂದು ಅರಣ್ಯ ಇಲಾಖೆ ಹಾಗೂ ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಆರು ವರ್ಷದ ಬಾಲಕಿಯನ್ನು ಬಲಿಪಡೆದಿದ್ದ ಚಿರತೆಯನ್ನು ಸೆರೆಹಿಡಿಯಲಾಗಿತ್ತು. ಇಂದು ಬೆಳಗಿನ ಜಾವ ಮತ್ತೊಂದು ಚಿರತೆ ಬೋನಿಗೆ ಸಿಕ್ಕಿದ್ದು ಭಕ್ತಾದಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ತಿರಮಲದಲ್ಲಿ ಚಿರತೆಗಳ ಹಾವಳಿ ಹೆಚ್ಚಾದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳ ನೆರವಿನೊಂದಿಗೆ ʻಆಪರೇಷನ್ ಚೀತಾʼ ಕಾರ್ಯಕ್ರಮವನ್ನು ಕೈಗೆತ್ತಿಕೊಂಡರು. ಈ ಹಿನ್ನೆಲೆಯಲ್ಲಿ ಚಿರತೆಯನ್ನು ಸೆರೆ ಹಿಡಿಯಲು ಅಧಿಕಾರಿಗಳು ತಿರುಮಲಕ್ಕೆ ತೆರಳುವ ಫುಟ್‌ಪಾತ್‌ನಲ್ಲಿ ಮೂರು ಕಡೆ ಬೋನುಗಳನ್ನು ಹಾಕಿದ್ದಾರೆ.
ಮೊಕಲಿಮಿಟ್ಟಾ, ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, 35ನೇ ತಿರುವಿನಲ್ಲಿ ಬೋನ್ ಇಡಲಾಗಿದೆ. ಮೂರು ದಿನಗಳ ಹಿಂದೆ ಚಿರತೆಯೊಂದು ಬೋನಿನಲ್ಲಿ ಸಿಕ್ಕಿಬಿದ್ದಿತ್ತು. 50 ದಿನಗಳಲ್ಲಿ ಮೂರು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಿರುಮಲ ಪಾದಚಾರಿ ಮಾರ್ಗದಲ್ಲಿ ಕಾಡು ಪ್ರಾಣಿಗಳ ದಾಳಿ ತಡೆಯಲು ಟಿಟಿಡಿ ಅಧಿಕಾರಿಗಳು ವಿಶೇಷ ಭದ್ರತಾ ವ್ಯವಸ್ಥೆ ಮಾಡಿದ್ದಾರೆ.
ಮತ್ತೊಂದೆಡೆ, ಕಾಡಾನೆಗಳ ಚಲನವಲನವನ್ನು ಪತ್ತೆಹಚ್ಚಲು 500 ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸುವ ಮತ್ತು ಸಾಧ್ಯವಿರುವಲ್ಲೆಲ್ಲಾ ಡ್ರೋನ್ ಕ್ಯಾಮೆರಾಗಳನ್ನು ಬಳಸುವ ಪ್ರಕ್ರಿಯೆಯನ್ನು ಪರಿಗಣಿಸಲಾಗುತ್ತಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.