ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಷೇತ್ರದ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಮಾಗಡಿ ಕಾಂಗ್ರೆಸ್ ಶಾಸಕ ಹೆಚ್.ಸಿ. ಬಾಲಕೃಷ್ಣ ತೀವ್ರವಾಗಿ ಕಿಡಿಕಾರಿದ್ದಾರೆ. ಮಾಗಡಿ ತಾಲೂಕು ಪಂಚಾಯಿತಿಯಲ್ಲಿ ಆಯೋಜಿಸಲಾಗಿದ್ದ ಕುಂದುಕೊರತೆ ಆಲಿಸುವ ಸಭೆಯಲ್ಲಿ, ತಹಶೀಲ್ದಾರ್ ಡಿ.ಪಿ. ಶರತ್ ಕುಮಾರ್ ಅವರಿಗೆ ಸಾರ್ವಜನಿಕರ ಮುಂದೆಯೇ ಕಠಿಣ ಶಬ್ದಗಳಿಂದ ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸುತ್ತಿದ್ದ ಶಾಸಕರು, ಕೆಲಸಗಳಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು. “ಸರಿಯಾಗಿ ಕೆಲಸ ಮಾಡಿ, ಇಲ್ಲವಾದರೆ ಚಪ್ಪಲಿಯಲ್ಲಿ ಹೊಡೆಸುವೆ” ಎಂದು ತಹಶೀಲ್ದಾರ್ ಅವರಿಗೆ ನೇರವಾಗಿಯೇ ಎಚ್ಚರಿಕೆ ನೀಡಿದರು. “ಯಾವ ಅಧಿಕಾರಿ ಕೆಲಸ ಮಾಡುವುದಿಲ್ಲವೋ ಅವರ ಹೆಸರನ್ನು ಬರೆದಿಡಿ. ತಿಂಗಳಿಗೊಮ್ಮೆ ಕಂಪ್ಲೆಂಟ್ ಬಾಕ್ಸ್ ತೆರೆದು ಪರಿಶೀಲಿಸುತ್ತೇನೆ. ನಾನು ಉಪ ವಿಭಾಗಾಧಿಕಾರಿಗಳನ್ನು ಕರೆಯುತ್ತೇನೆ, ಅಂದು ನೀವು ಉತ್ತರ ನೀಡಬೇಕು,” ಎಂದು ಗುಡುಗಿದರು.
ದಕ್ಷ ಅಧಿಕಾರಿ ದಿವಂಗತ ಡಿ.ಕೆ. ರವಿ ಅವರನ್ನು ನೆನಪಿಸಿಕೊಂಡ ಶಾಸಕರು, “ಯುವ ಅಧಿಕಾರಿಗಳು ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಅವರೇ ಮಾದರಿ. ರವಿ ಅವರು ಮೃತಪಟ್ಟಾಗ ಇಡೀ ನಾಡೇ ಕಣ್ಣೀರಿಟ್ಟಿತ್ತು. ಆದರೆ ನೀವು ಕೆಲಸ ಮಾಡದಿದ್ದರೆ ಜನ ನಿಮ್ಮನ್ನು ಕಂಡು ಕಣ್ಣೀರಿಡುವುದಿಲ್ಲ, ಬದಲಿಗೆ ತೊಲಗಿ ಎಂದು ಶಾಪ ಹಾಕುತ್ತಾರೆ. ಮಾತನಾಡದಿದ್ದರೆ ನಿಮ್ಮನ್ನು ಮುತ್ತಿಕ್ಕುತ್ತಾರಾ? ನಾಚಿಕೆಯಾಗುವುದಿಲ್ಲವೇ ನಿಮಗೆ?” ಎಂದು ತರಾಟೆಗೆ ತೆಗೆದುಕೊಂಡರು.
“ನನ್ನ ಈ ಹೇಳಿಕೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದರೂ ಪರವಾಗಿಲ್ಲ. ಜನ ಕೆಲಸ ಮಾಡದಿದ್ದರೆ ನಿನಗೆ ಹೊಡೆಯುತ್ತಾರೆ, ನಿನ್ನ ಕೈಲಿ ಕೆಲಸ ಮಾಡಿಸಲು ನನಗೆ ಸಾಧ್ಯವಾಗದಿದ್ದರೆ ನನಗೆ ಹೊಡೆಯುತ್ತಾರೆ,” ಎಂದು ಶಾಸಕರು ಸಾರ್ವಜನಿಕರ ಆಕ್ರೋಶವನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

