ಪಡಿತರದಾರರಿಗೆ ಶೀಘ್ರವೇ ಸ್ಮಾರ್ಟ್ ಕಾರ್ಡ್: ಸಚಿವ ಕೆ.ಎಚ್.ಮುನಿಯಪ್ಪ

ಹೊಸದಿಗಂತ ವರದಿ, ಕೋಲಾರ:

ಪಡಿತದಾರರಿಗೆ ಚೀಟಿ ಜತೆಗೆ ಶೀಘ್ರವೇ ಸ್ಮಾರ್ಟ್ ಕಾರ್ಡ್ ಕೊಡಲಾಗುವುದು. ಬಿಪಿಎಲ್ ಹಾಗೂ ಎಪಿಎಲ್ ಚೀಟಿದಾರರಿಗೆ ವಿತರಿಸಲಾಗುವುದು ಎಂದು ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ಸಾಯಿಬಾಬಾ ಹುಟ್ಟುಹಬ್ಬದ ಅಂಗವಾಗಿ ನಗರದ ಸಾಯಿಬಾಬ ಮಂದಿರಕ್ಕೆ ಗುರುವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ,ಅನ್ನಭಾಗ್ಯ ಯೋಜನೆಯಡಿ ೧.೧೩ ಕೋಟಿ ಕಾರ್ಡ್‌ದಾರರಿಗೆ ೪ ಕೋಟಿ ಜನರಿಗೆ ಹಣ ಸಂದಾಯ ಮಾಡಿದ್ದೇವೆ. ೨.೬೬ ಲಕ್ಷ ಕಾರ್ಡ್‌ದಾರರು ಪೋಸ್ಟಲ್ ಇಲಾಖೆಯಲ್ಲಿ ಖಾತೆ ತೆರೆದಿದ್ದು, ಅವರಿಗೂ ಹಣ ಸಂದಾಯವಾಗುತ್ತಿದೆ. ಶೇ.೯೦ರಷ್ಟು ಅಧಿಕ ಕಾರ್ಡ್‌ದಾರರಿಗೆ ಈಗಾಗಲೇ ಹಣ ತಲುಪಿದೆ.

ಇನ್ನೂ ಏಳು ಲಕ್ಷ ಕಾರ್ಡ್‌ದಾರರು ಬ್ಯಾಂಕ್ ಖಾತೆ ತೆರೆಯದಿರುವುದು ಸೇರಿದಂತೆ ವಿವಿಧ ಸಮಸ್ಯೆ ಇದೆ. ಅಂಥವರಿಗೆ ಹಣ ತಲುಪಿಲ್ಲ. ಅವರಿಗೂ ಹಣ ಸಂದಾಯ ಮಾಡಲು ಇಲಾಖೆ ಅಧಿಕಾರಿಗಳೇ ಖುದ್ದಾಗಿ ಕಾರ್ಡ್‌ಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದರು.

ಕಾಂತರಾಜ ವರದಿ ತೀರ್ಮಾನವಾಗಿಲ್ಲ
ಕಾಂತರಾಜ ವರದಿ ಸಂಬಂಧ ಕಾಂಗ್ರೆಸ್ ಸರಕಾರ ಯಾವುದೇ ವರ್ಗಕ್ಕೆ ಅನ್ಯಾಯವಾಗದಂತೆ ತೀರ್ಮಾನ ಕೈಗೊಳ್ಳಲಿದೆ ಎಂದು
ಕಾಂತರಾಜ ವರದಿ ಜಾರಿ ವಿಚಾರದಲ್ಲಿ ಯಾವುದೇ ವರ್ಗಕ್ಕೆ ಅನ್ಯಾಯವಾಗಬಾರದು. ನ್ಯಾಯಸಮ್ಮತವಾಗಿ ಜನಸಂಖ್ಯೆಗೆ ಅನುಗುಣವಾಗಿ ಅವಕಾಶ ಸಿಗಬೇಕು. ಈ ವಿಚಾರದಲ್ಲಿ ಸರಕಾರ ಇದುವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದರು.
ರಾಷ್ಟ್ರಮಟ್ಟದಲ್ಲಿ ಶೋಷಿತರು, ಹಿಂದುಳಿದ ವರ್ಗದವರು ಹೆಚ್ಚು ಜನ ಇದ್ದಾರೆ. ಎಲ್ಲಾ ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲಾ ಸಮುದಾಯದವರು ಸಮನಾಗಿ ಬದುಕಬೇಕೆಂಬ ಉದ್ದೇಶದಿಂದ ರಾಹುಲ್ ಗಾಂಧಿ ಜಾತಿ ಜನಗಣತಿ ವಿಚಾರವಾಗಿ ಮಾತನಾಡಿದ್ದಾರೆ.
ರಾಜ್ಯದಲ್ಲಿ ಪರಿಸ್ಥಿತಿ ಯಾವ ರೀತಿ ಇದೆ ಎಂಬುದನ್ನು ಚರ್ಚಿಸದೆ ತೀರ್ಮಾನಕ್ಕೆ ಬರಲು ಆಗದು. ಕಾಂತರಾಜ ವರದಿಯು ಸಚಿವ ಸಂಪುಟದ ಮುಂದೆ ಬಂದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಜಾರಿ ಮಾಡಬೇಕಾಗುತ್ತದೆ ಎಂದು ಹೇಳಿದರು.

ಸಂಸತ್ ಚುನಾವಣೆ ಹೈಕಮಾಂಡ್ ತೀರ್ಮಾನ
ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿ, ಹೈಕಮಾಂಡ್ ತೀರ್ಮಾನ ಮಾಡಲಿದೆ. ಅವರು ಹೇಳಿದಂತೆ ನಾನು ಕೇಳುತ್ತೇನೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ನಾನು ಹೇಳಿರಲಿಲ್ಲ. ಆದರೆ, ಟಿಕೆಟ್ ಕೊಟ್ಟರು ಎಂದ ಅವರು, ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕಾರಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾಯಿ ಬಾಬಾ ಮಂದಿರದಲ್ಲಿ ಪ್ರತಿವರ್ಷವೂ ನಟರಾಜ್ ನೇತೃತ್ವದಲ್ಲಿ ಸಮಿತಿಯವರು ಶ್ರದ್ಧಾ ಭಕ್ತಿಯಿಂದ ಬಾಬಾರ ಹುಟ್ಟುಹಬ್ಬವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ದೇವಾಲಯವು ದೊಡ್ಡ ಯಾತ್ರಸ್ಥಳವಾಗಿ ಹೊರಹೊಮ್ಮುತ್ತಿದ್ದು, ಎಲ್ಲಾ ಧರ್ಮದವರು ಬಂದು ಪ್ರಾರ್ಥಿಸುತ್ತಾರೆ, ಯಾವುದೇ ಭೇದಭಾವ ಇಲ್ಲ. ನಾನು ಈ ಶಿರಡಿ ಸಾಯಿಬಾಬಾ ಭಕ್ತ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಎಸ್ಟಿ ಘಟಕದ ಅಧ್ಯಕ್ಷ ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು,ಸಿರಾಜುದ್ದೀನ್, ಅತಾವುಲ್ಲ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!