ಕಾಂಗ್ರೆಸ್ ಕರಾಳ ಮುಖ ಬಯಲು: ಬಿಜೆಪಿ ಪ್ರತಿಭಟನೆ

ಹೊಸದಿಗಂತ ವರದಿ ಹಾವೇರಿ:

ಕಾಂಗ್ರೆಸ್ ಕರಾಳದಂಧೆ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ಹಣದ ಕ್ರೋಢೀಕರಣಕ್ಕೆ ಮುಂದಾಗಿದೆ. ಈ ದಂಧೆಯಲ್ಲಿ ಭಾಗಿಯಾದವರನ್ನು ಶಿಕ್ಷೆಗೆ ಒಳಪಡಿಸುವಂತೆ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು.

ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಶಿವರಾಜ ಸಜ್ಜನರ, ಇತ್ತೀಚಿಗೆ ಜಾರ್ಖಂಡ್‌ನ ರಾಜ್ಯಸಭಾ ಸದಸ್ಯ ಧೀರಜ್ ಸಾಹುಗೆ ಸೇರಿದ ವಿವಿದೆಡೆ ತೆರಿಗೆ ಇಲಾಖೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಬೃಹತ್ ಭ್ರಷ್ಟಾಚಾರದ ಮುಖವಾಡ ಕಳಚಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಈ ಬೃಹತ್ ಮೊತ್ತವನ್ನು ಕಾಂಗ್ರೆಸ್ ಪಕ್ಷವೇ ಧೀರಜ್ ಸಾಹು ಅವರ ಮನೆಯಲ್ಲಿ ಸಂಗ್ರಹಿಸಲು ಮುಂದಾಗಿತ್ತು ಎಂದು ಅವರು ಆರೋಪಿಸಿದರು.

ಸುಮಾರು ಐದು ದಿನಗಳ ಕಾಲ ತೆರಿಗೆ ಅಧಿಕಾರಿಗಳು 40ಕ್ಕೂ ಹೆಚ್ಚು ಹಣವನ್ನು ಎಣಿಕೆ ಮಾಡುವ ಯಂತ್ರಗಳು ಬರೋಬ್ಬರಿ353ಕೋಟಿಗೂ ಹೆಚ್ಚಿನ ನಗದು ಹಣವನ್ನು ಪತ್ತೆ ಮಾಡಿವೆ. ಇಷ್ಟು ಬೃಹತ್ ಮೊತ್ತ ಶೇಖರಣೆ ಮಾಡಿದ್ದು, ಕಾಂಗ್ರೆಸ್‌ನ ಕ್ರೋಢೀಕರಣ ದಂದೆ ಬಯಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಕೂಡ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರ ವಿಪರೀತ ಭ್ರಷ್ಟಾಚಾರಕ್ಕೆ ಮುಂದಾಗಿದ್ದಾರೆ. ಕಳೆದ ಕೆಲವೇ ದಿನಗಳ ಹಿಂದೆ ನಡೆದ ಪಂಚರಾಜ್ಯ ಚುನಾವಣೆಗೆ ಇಲ್ಲಿನ ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರಿಂದ ಹಣ ಸಂಗ್ರಹಿಸಿ ಅಲ್ಲಿ ಚುನಾವಣೆಗೆ ವೆಚ್ಚ ಮಾಡಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ನಿರಂತರವಾಗಿ ದೇಶವನ್ನು 63ವರ್ಷಗಳ ಕಾಲ ಲೂಟಿ ಮಾಡಿದೆ. ಸ್ವಿಡ್ಜರ್‌ಲೆಂಡ್ ದೇಶ ಅಭಿವೃದ್ಧಿ ಆಗುತ್ತಿರುವುದು ಭಾರತೀಯ ಕಾಂಗ್ರೆಸ್ ನಾಯಕರು ಅಲ್ಲಿನ ಸ್ವಿಸ್ ಬ್ಯಾಂಕಿನಲ್ಲಿ ಇಟ್ಟ ಹಣದಿಂದ ಎಂಬುದನ್ನು ಗಮನಿಸಬೇಕಿದೆ. ಈ ಮೊತ್ತವನ್ನು ವಾಪಸ್ ತರಲು ನಾವು ಪ್ರದಾನಿ ನರೇಂದ್ರ ಮೋದಿ ಅವರಲ್ಲಿ ಆಗ್ರಹಿಸುತ್ತೇವೆ. ರಾಜ್ಯ ಸರ್ಕಾರ ವರ್ಗಾವಣೆ, ಕಮೀಷನ್, ವಸೂಲಿ ದಂಧೆ ಹೀಗೆ ಹಲವು ಕರಾಳ ಮುಖಗಳಿಂದ ಹಣದ ಸಂಗ್ರಹಣೆಗೆ ಮುಂದಾಗಿದೆ. ಇಂಥ ಕೈ ನಾಯಕರ ಅಕ್ರಮಗಳಿಗೆ ಬೇಸತ್ತು ಜನತೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಐ.ಎನ್.ಡಿ.ಐ.ಎ.ಕೂಟಕ್ಕೆ ಉಳಿಗಾಲವಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಮುಖಂಡರಾದ ಕೆ.ಶಿವಲಿಂಗಪ್ಪ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ರೈತ ಮೋರ್ಚಾದ ಪಾಲಾಕ್ಷಗೌಡ ಪಾಟೀಲ, ಡಾ.ಬಸವರಾಜ ಕೇಲಗಾರ, ಭೋಜರಾಜ ಕರೂದಿ, ರಾಜು ಹೊಸಕೇರಿ, ಮಂಜುನಾಥ ಮಡಿವಾಳರ, ನಂಜುಂಡೇಶ ಕಳ್ಳೇರ ಸೇರಿದಂತೆ ಹಲವರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!