ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಜಿಲ್ಲೆಯ ಉಪ್ಪಳ ಪರಿಸರದಲ್ಲಿ ಅನಾಥ ಸ್ಥಿತಿಯಲ್ಲಿ ಪತ್ತೆಯಾದ ವಿದ್ಯಾರ್ಥಿಗಳ ಎರಡು ಶಾಲಾ ಬ್ಯಾಗ್ ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣಕ್ಕೆ ಕಾರಣವಾದ ಘಟನೆ ವರದಿಯಾಗಿದೆ.
ಉಪ್ಪಳ ಕೈಕಂಬ ಪರಿಸರದಲ್ಲಿ ಮಣ್ಣಿನ ದಿಬ್ಬವೊಂದರ ಬಳಿ ಎರಡು ಶಾಲಾ ಬ್ಯಾಗ್ ಸಾರ್ವಜನಿಕರಿಗೆ ಕಾಣಸಿಕ್ಕಿತ್ತು. ಆದರೆ ಇದರ ವಾರೀಸುದಾರರು ಕಾಣದ ಹಿನ್ನೆಲೆಯಲ್ಲಿ ಆತಂಕ ಹೆಚ್ಚಿಸಿತ್ತು. ಸುತ್ತಮುತ್ತ ಹುಡುಕಾಟ ನಡೆಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದು ಬ್ಯಾಗ್‌ನ ಮೇಲೆ ನಿರಂತರ ನಿಗಾ ಇರಿಸಿದ್ದರು. ಕೊನೆಗೆ ಸಂಜೆ 4 ಗಂಟೆ ಸುಮಾರಿಗೆ ಇಬ್ಬರು ವಿದ್ಯಾರ್ಥಿಗಳು ಆಗಮಿಸಿ ಬ್ಯಾಗ್ ಎತ್ತಿಕೊಳ್ಳಲು ಸಿದ್ಧತೆ ನಡೆಸಿದ್ದು, ಪೊಲೀಸರು ವಿಚಾರಣೆ ನಡೆಸಿದಾಗ ತಾವು ಪರೀಕ್ಷೆಗೆ ಹೆದರಿ ಇಲ್ಲೆ ಪಕ್ಕದ ಕುರುಚಲು ಕಾಡಿನಲ್ಲಿ ಅವಿತು ಕುಳಿತಿರುವುದಾಗಿ ಹೇಳಿದ್ದಾರೆ.
ಪೊಲೀಸರು ಮಕ್ಕಳ ಪೋಷಕರನ್ನು ಕರೆಸಿ ಬುದ್ದಿಮಾತು ಹೇಳಿ ಅವರ ವಶಕ್ಕೆ ಒಪ್ಪಿಸಿದ್ದಾರೆ.