ಕೇರಳದಲ್ಲಿ ಹೊಸ ಕೋವಿಡ್ ತಳಿ ಪ್ರಕರಣ ಹೆಚ್ಚಳ: ಮೈಸೂರು ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಣೆ

ಹೊಸ ದಿಗಂತ ವರದಿ, ಮೈಸೂರು:

ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್‌ನ ಹೊಸ ತಳಿ ಜಿಎನ್ 1 ಪತ್ತೆಯಾಗಿ, ಪ್ರಕರಣಗಳು ಹೆಚ್ಚಾಗಿ ಒಂದು ಸಾವು ಸಂಭವಿಸಿರುವ ಹಿನ್ನಲೆಯಲ್ಲಿ ಆ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಮೈಸೂರು ಜಿಲ್ಲೆಯಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಪಿ.ಸಿ ಕುಮಾರಸ್ವಾಮಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಯಂತ್ರಿಸಲು ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಸೂಚನೆಯಂತೆ ಮೈಸೂರು ಜಿಲ್ಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ನಮ್ಮ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಕೇರಳ ರಾಜ್ಯದ ಗಡಿಭಾಗದಲ್ಲಿ ಇನ್ನು ಅಷ್ಟೊಂದು ಸಮಸ್ಯೆ ಎದುರಾಗಿಲ್ಲ. ಶೀಘ್ರದಲ್ಲಿ ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ ನಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದ ತಂಡವನ್ನು ನಿಯೋಜನೆ ಮಾಡಲಾಗುವುದು ಎಂದು ಹೇಳಿದರು.

ಈಗಾಗಲೇ ಜಿಲ್ಲೆಯ ತಾಲ್ಲೂಕು ಆರೋಗ್ಯಾಧಿಕಾರಿಗಳ ಸಭೆ ನಡೆಸಲಾಗಿದೆ. ಅದರಲ್ಲೂ ಹೆಚ್.ಡಿ.ಕೋಟೆ ಭಾಗದಲ್ಲಿ ಹೆಚ್ಚಿನ ಕ್ರಮ ವಹಿಸಲಾಗುವುದು. ಎಲ್ಲಾ ಕಡೆ ಮಾಕ್ ಡ್ರಿಲ್ ಮಾಡಿ ತಯಾರಿ ನಡೆಸಲಾಗಿದ್ದು, ಆಕ್ಸಿಜನ್ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ. ವಾತಾವರಣದ ಬದಲಾವಣೆಯಿಂದ ಜನರಲ್ಲಿ ಆರೋಗ್ಯ ಸಮಸ್ಯೆ ಎದುರಾಗಿದ್ದು, ನೆಗಡಿ ಕೆಮ್ಮು ಜ್ವರ ಪ್ರಕರಣ ಹೆಚ್ಚಾಗುತ್ತಿದೆ. ಇದಕ್ಕೆ ಜನರು ಆತಂಕ ಪಡುವ ಅಗತ್ಯತೆ ಇಲ್ಲ ಎಂದು ಹೇಳಿದರು.

ಆರೋಗ್ಯದ ವಿಚಾರದಲ್ಲಿ ವದಂತಿ ಸುಳ್ಳು ಮಾಹಿತಿ ಹಬ್ಬಿಸುವುದು ಅಕ್ಷಮ್ಯ ಅಪರಾಧ, ಈ ಬಗ್ಗೆ ಯಾವುದೇ ಮುಲಾಜಿಲ್ಲದೆ ಅಂತವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!