ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಶ್ಚಿಯನ್ನ ಕ್ಯಾಥೋಲಿಕ್ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿಯಾಗುತ್ತಿದ್ದು, ಎರಡು ದಿನಗಳ ಕಾಲ ವ್ಯಾಟಿಕನ್ ಸಿಟಿಗೆ ಪ್ರಯಾಣ ಬೆಳೆಸಲಿದ್ದಾರೆ. ಇಂದು ಅವರು ವ್ಯಾಟಿಕನ್ಗೆ ತೆರಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಏಪ್ರಿಲ್ 25 ಮತ್ತು 26ರಂದು ವ್ಯಾಟಿಕನ್ ನಗರಕ್ಕೆ ಭೇಟಿ ನೀಡಲಿದ್ದಾರೆ. ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆಯಲ್ಲಿ ಭಾರತದ ಪರವಾಗಿ ಅವರು ಭಾಗಿಯಾಗಲಿದ್ದು, ಸಂತಾಪ ವ್ಯಕ್ತಪಡಿಸಲಿದ್ದಾರೆ.
ಪೋಪ್ ಫ್ರಾನ್ಸಿಸ್ ಈಸ್ಟರ್ ದಿನದಂದು ನಿಧನರಾಗಿದ್ದರು. 88 ವರ್ಷದ ಅವರು ವಯೋಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದ್ದರು. ಪೋಪ್ ಫ್ರಾನ್ಸಿಸ್ ಅವರನ್ನು ಜಗತ್ತಿನಾದ್ಯಂತ ಲಕ್ಷಾಂತರ ಜನರು ಕರುಣೆ, ನಮ್ರತೆ ಮತ್ತು ಆಧ್ಯಾತ್ಮಿಕ ಧೈರ್ಯದ ಸಂಕೇತವಾಗಿ ಸ್ಮರಿಸುತ್ತಾರೆ. ಶುಕ್ರವಾರ ವ್ಯಾಟಿಕನ್ ನಗರದ ಸೇಂಟ್ ಪೀಟರ್ ಬೆಸಿಲಿಕಾದಲ್ಲಿ ಮಾಲಾರ್ಪಣೆ ಮಾಡುವ ಮೂಲಕ ರಾಷ್ಟ್ರಪತಿ ಮುರ್ಮು ಪೋಪ್ ಫ್ರಾನ್ಸಿಸ್ ಅವರಿಗೆ ಗೌರವ ಸಲ್ಲಿಸಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಏಪ್ರಿಲ್ 26ರಂದು ವ್ಯಾಟಿಕನ್ ನಗರದ ಸೇಂಟ್ ಪೀಟರ್ಸ್ ಸ್ಕ್ವೇರ್ನಲ್ಲಿ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಈ ಅಂತ್ಯಕ್ರಿಯೆಯ ಪ್ರಾರ್ಥನೆಯಲ್ಲಿ ಜಗತ್ತಿನ ವಿವಿಧ ದೇಶಗಳ ಗಣ್ಯರು ಭಾಗಯಾಗಲಿದ್ದಾರೆ.