ಹೊಸದಿಗಂತ ವರದಿ, ಅಂಕೋಲಾ:
ಸಹಸ್ರಾರು ಭಕ್ತಜನರ ಹರ್ಷೋದ್ಗಾರ, ಚಪ್ಪಾಳೆ ಜಯಘೋಷಗಳ ನಡುವೆ ದೇವರ ಕಳಸ ಉಲಿ ಚಪ್ಪರದ ಮೇಲೆ ಏರುವುದರೊಂದಿಗೆ ಅಂಕೋಲಾದ ಸುಪ್ರಸಿದ್ಧ ಶ್ರೀಶಾಂತಾದುರ್ಗಾ ದೇವಿಯ ಬಂಡಿ ಹಬ್ಬ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು.
ಕುಂಬಾರಕೇರಿಯ ಕಳಸ ದೇವಾಲಯದಿಂದ ಭಕ್ತ ಜನರ ಪೂಜೆ ಸ್ವೀಕರಿಸುತ್ತ ಬಂದ ಶ್ರೀಶಾಂತಾದುರ್ಗಾ ದೇವಿಯ ಕಳಸದ ಮೆರವಣಿಗೆ ಬಂಡಿ ಬಜಾರದ ಆಡುಕಟ್ಟೆಯಲ್ಲಿ ಬಂದು ಕುಳಿತು ವಾದ್ಯ ಘೋಷ, ಬಲಿ ಮಕ್ಕಳ ಜೊತೆಗೂಡಿ ಉಲಿ ಚಪ್ಪರಕ್ಕೆ ಆಗಮಿಸಿ ಅಲ್ಲಿ ಸಂಪ್ರದಾಯದಂತೆ ಕಳಸ ಹೊತ್ತ ಗುನಗರು ದೇವರ ಕಳಸದೊಂದಿಗೆ ಉಲಿ ಚಪ್ಪರ ಏರಿದರು.
ಕಳಸ ಚಪ್ಪರ ಏರಿ ಇಳಿದ ನಂತರ ಗುನಗರು,ಕಟಗಿದಾರರು, ಬಲಿ ಮಕ್ಕಳು ಉಲಿ ಚಪ್ಪರ ಏರಿದರು.
ಪಟ್ಟಣದ ಕುಂಬಾರಕೇರಿ ರಸ್ತೆಯಲ್ಲಿ ಇರುವ ಬಂಡಿಕಟ್ಟೆ ಮತ್ತು ಬಂಡಿ ಬಜಾರದ ಬಂಡಿ ಕಟ್ಟೆ ಬಳಿ ಇಡಗಾಯಿ ಒಡೆಯುವ ಸಂಪ್ರದಾಯ ನಡೆಯಿತು. ಬಂಡಿ ಹಬ್ಬದ ನಿಮಿತ್ತ ಸಂಪೂರ್ಣ ಅಂಕೋಲಾ ಪಟ್ಟಣ ಜನರಿಂದ ಕಿಕ್ಕಿರಿದು ತುಂಬಿತ್ತು ಸುಮಾರು 15 ಸಾವಿರಕ್ಕೂ ಹೆಚ್ಚು ಜನ ಜಮಾಯಿಸಿ ಶಾಂತಾದುರ್ಗಾ ದೇವಿಗೆ ಜಯಕಾರ ಕೂಗಿದರು.
ಬಂಡಿಹಬ್ಬದ ಪ್ರಯುಕ್ತ ಶಾಂತಾದುರ್ಗಾ ದೇವಾಲಯದಲ್ಲಿ ಹಣ್ಣು ಕಾಯಿ, ಉಡಿಸೇವೆ, ತುಲಾಬಾರ, ಗಿಂಡಿ ತುಂಬುವ ಸೇವೆಗಳು ನಡೆದವು. ನಸುಕಿನ ಜಾವ 5 ಗಂಟೆಯಿಂದಲೇ ಭಕ್ತಜನರು ಸರತಿ ಸಾಲಿನಲ್ಲಿ ನಿಂತು ವಿವಿಧ ಸೇವೆಗಳನ್ನು ಸಲ್ಲಿಸುತ್ತಿರುವುದು ಕಂಡು ಬಂತು.