ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೇ ದಿನ ಮೂರು ಮನೆಗಳಲ್ಲಿ ಕೈಚಳಕ ತೋರಿದ್ದ ಕುಖ್ಯಾತ ಕಳ್ಳನನ್ನು ನಗರದ ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದ ಕಾಮೆಪಲ್ಲಿ ಮೂಲದ ಶ್ರೀನಿವಾಸ್ (35) ಬಂಧಿತ ಆರೋಪಿ. ಕಳ್ಳತನ, ಸೈಬರ್ ವಂಚನೆ ಸೇರಿದಂತೆ ಆಂಧ್ರ ಪ್ರದೇಶವೊಂದರಲ್ಲೇ 80ಕ್ಕೂ ಅಧಿಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಶ್ರೀನಿವಾಸ್‌ನನ್ನು ಬಂಧಿಸಿ, 9.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಮೆಪಲ್ಲಿ ಮೂಲದ ಶ್ರೀನಿವಾಸ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವೀಧರ. ಆತನ ಸಹೋದರರು ಸಹ ಉತ್ತಮ ಶಿಕ್ಷಣ ಪಡೆದು ವಿದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ ಶ್ರೀನಿವಾಸ್ ಮಾತ್ರ ಆನ್‌ಲೈನ್ ಗೇಮಿಂಗ್ ಗೀಳಿಗೆ ಬಿದ್ದು ಅಡ್ಡದಾರಿ ಹಿಡಿದಿದ್ದ. ಆರಂಭದಲ್ಲಿ ಆಂಧ್ರಪ್ರದೇಶದಲ್ಲಿ ಸಿನೆಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಶ್ರೀನಿವಾಸ್, 2008ರಲ್ಲಿ ಸೆಟ್‌ನಲ್ಲಿ ಲ್ಯಾಪ್‌ಟಾಪ್ ಕಳ್ಳತನ ಮಾಡಿ ಜೈಲು ಸೇರಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಳಿಕ ಕಳ್ಳತನವನ್ನೇ ಫುಲ್ ಟೈಮ್ ಕೆಲಸ ಮಾಡಿಕೊಂಡಿದ್ದ ಆರೋಪಿಯ ವಿರುದ್ಧ ಇದುವರೆಗೂ ಆಂಧ್ರಪ್ರದೇಶವೊಂದರಲ್ಲಿಯೇ 80ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದವು. ನಂತರ ಮೈಸೂರಿಗೆ ಬಂದು ವಾಸಿಸಲಾರಂಭಿಸಿದ್ದ ಶ್ರೀನಿವಾಸ್, ಊರೂರು ಸುತ್ತಿ ಮನೆಗಳ್ಳತನ ಮಾಡುತ್ತಿದ್ದ. ಕರ್ನಾಟಕದಲ್ಲಿಯೂ ಧಾರವಾಡ, ಬೀದರ್, ಬೆಂಗಳೂರಿನಲ್ಲಿ ಆರೋಪಿಯ ವಿರುದ್ಧ 4 ಪ್ರಕರಣಗಳು ದಾಖಲಾಗಿವೆ.