ಹೊಸದಿಗಂತ ಡಿಜಿಟಲ್ ಡೆಸ್ಕ್:
ಈವರೆಗೂ ವಿಧಾನಸೌಧವನ್ನು ಎಲ್ಲರೂ ಹೊರಗಿನಿಂದಷ್ಟೇ ನೋಡಬಹುದು, ಅದರ ಮುಂದೆ ಫೋಟೊ ತೆಗೆದುಕೊಳ್ಳಬಹುದು. ಆದರೆ ಯಾರಿಗೂ ಭವ್ಯ ಕಟ್ಟಡದ ಆವರಣದೊಳಗೆ ಬರೋದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಈಗ ವಿಧಾನಸೌಧಕ್ಕೆ ಸಾರ್ವಜನಿಕರಿಗೂ ಪ್ರವೇಶ ನೀಡಲು ರಾಜ್ಯ ಸರ್ಕಾರ ಹೊಸ ಹಾಗೂ ವಿನೂತನ ಕಾರ್ಯಕ್ರಮ ಏರ್ಪಡಿಸುತ್ತಿದೆ.
ಇದೊಂದು ಐತಿಹಾಸಿಕ ತೀರ್ಮಾನವಾಗಿದ್ದು,ಸಾಮಾನ್ಯ ವ್ಯಕ್ತಿಗೂ ವಿಧಾನಸೌಧ ವೀಕ್ಷಣೆಗೆ ಸುವರ್ಣ ಅವಕಾಶ ಕಲ್ಪಿಸಲಾಗುತ್ತಿದೆ. ಅದರಲ್ಲೂ ಶಕ್ತಿ ಕೇಂದ್ರದಲ್ಲಿ ಶಾಸಕರು, ಸಚಿವರು ಕುರಿತುಕೊಳ್ಳುವ ವಿಧಾನಸಭೆ, ವಿಧಾನ ಪರಿಷತ್ ನೋಡೋದಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ‘ವಿಧಾನಸೌಧ ಮಾರ್ಗದರ್ಶಿ ಪ್ರವಾಸ’ ಅನ್ನೋ ಹೆಸರಿನಲ್ಲಿ ವಿನೂತನ ಕಾರ್ಯಕ್ರಮ ಶುರು ಮಾಡಲಾಗುತ್ತಿದೆ.
ಪ್ರತೀ ಭಾನುವಾರ ಹಾಗೂ ಎರಡು ಮತ್ತು ನಾಲ್ಕನೇ ಶನಿವಾರ ವಿಧಾನಸೌಧ ಪ್ರವಾಸಕ್ಕೆ ಅವಕಾಶ ಇದೆ. ಆನ್ಲೈನ್ನಲ್ಲಿ (https://kstdc.co/activities) ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕು. ಜೂನ್ 1 ರಿಂದ ಅಧಿಕೃತ ವಿಧಾನಸೌಧ ಪ್ರವಾಸ ಆರಂಭವಾಗಲಿದೆ.
ವಿಧಾನಸೌಧ ಟೂರ್ಗೆ 16 ವರ್ಷ ಮೇಲ್ಪಟ್ಟವರಿಗೆ 50 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. 16 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಮಕ್ಕಳಿಗೆ ಉಚಿತ, ವಿಧಾನಸೌಧ ಟೂರ್ ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಇರಲಿದೆ. ದಿನಕ್ಕೆ ಪ್ರತೀ ಬ್ಯಾಚ್‌ನಲ್ಲಿ 30 ಜನರಂತೆ ವಿಧಾನಸೌಧ ವೀಕ್ಷಣೆ ಇದೆ. ದಿನಕ್ಕೆ 300 ಮಂದಿಗೆ ಮಾತ್ರ ವಿಧಾನಸೌಧ ನೋಡುವ ಅವಕಾಶ ಮಾಡಲಾಗಿದೆ. ಒಂದು ಬ್ಯಾಚ್ ವಿಧಾನಸೌಧ ಪ್ರವಾಸಕ್ಕೆ ಒಂದೂವರೆ ಗಂಟೆ ಸಮಯ, ಒಂದೂವರೆ ಕಿಮೀ ಸಮಯ ನಿಗದಿಯಾಗಿದೆ.