ಹೊಸದಿಗಂತ ವರದಿ ಚಿಕ್ಕಮಗಳೂರು:
ಮಳೆ, ಗಾಳಿಯಿಂದ ಅನಾಹುತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಒಣಗಿದ ಮರಗಳು ಮತ್ತು ಬಾಗಿದ ರೆಂಬೆ, ಕೊಂಬೆಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕರು, ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಯಲ್ಲಿ ಮಳೆಯಿಂದ ಸಂಭವಿಸಿರುವ ಹಾನಿ, ಪರಿಹಾರ ಕ್ರಮಗಳ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
ಮರ ಬಿದ್ದ ಪರಿಣಾಮ ಇಬ್ಬರ ಜೀವ ಹಾನಿ ಸಂಭವಿಸಿದೆ. ಅವರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ, ಪರಿಹಾರ ವಿತರಿಸಿದ್ದೇವೆ ಎಂದರು.
ಈ ಬಾರಿ ಮುಂಗಾರು ಮೇ ಮೊದಲ ವಾರದಲ್ಲೇ ಆರಂಭವಾಗಿದೆ, ಉತ್ತಮ ಪ್ರಮಾಣದಲ್ಲಿ ಮಳೆಯಾಗಿದೆ. ಮುಂಗಾರು ಮುಂದುವರಿಯುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದರು. ಮೆಸ್ಕಾಂ ಸಹ ವಿಶೇಷ ಕಾರ್ಯಪಡೆ ರಚಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಗಾಳಿ ಹೆಚ್ಚಾದ ಪರಿಣಾಮ ಒಂದಷ್ಟು ಹಾನಿ ಸಂಭವಿಸಿದೆ. ರಸ್ತೆಗಳಿಗೂ ಹಾನಿ ಉಂಟಾಗಿದೆ ಅದರ ದುರಸ್ಥಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
೫೦೦ ಮಂದಿ ಮೆಸ್ಕಾಂ ಲೈನ್ ಮ್ಯಾನ್‌ಗಳಿದ್ದರೆ. ಹೆಚ್ಚುವರಿಯಾಗಿ 100 ಮಂದಿ ಗ್ಯಾಂಗ್ ಮನ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಅನುಮತಿ ನೀಡಲಾಗಿದೆ. ಅಗತ್ಯ ವಾಹನಗಳನ್ನು ಮೆಸ್ಕಾಂ ಒದಗಿಸಿದೆ ಎಂದು ತಿಳಿಸಿದರು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಮಳೆ ಸಂದರ್ಭದಲ್ಲಿ ಗುಡ್ಡ ಕುಸಿತ ಉಂಟಾಗುತ್ತದೆ. ಅಂತಹ ಸ್ಥಳಗಳಲ್ಲಿ ರಸ್ತೆ ಬದಿಯನ್ನು ಇನ್ನಷ್ಟು ಅಗಲೀಕರಣಗೊಳಿಸಲು ಸೂಚಿಸಿದ್ದೇವೆ ಎಂದರು.
ಮಳೆ ಹಾನಿ ನಿರ್ವಹಣೆಗೆ ತಾಲ್ಲುಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪರಿಹಾರ ಕಾರ್ಯದಲ್ಲಿ ತೊಡಗುವ ಸಿಬ್ಬಂದಿಗಳಿಗೆ ಎನ್‌ಡಿಆರ್‌ಎಫ್‌ನಿಂದ ತರಬೇತಿ ಕೊಡಿಸಲಾಗಿದೆ. ೨೪ ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ. ತೆರೆಯಲಾಗಿದೆ ಎಂದು ತಿಳಿಸಿದರು.
ಶಾಸಕರುಗಳಾದ ಎಚ್.ಡಿ.ತಮ್ಮಯ್ಯ, ಟಿ.ಡಿ.ರಾಜೇಗೌಡ, ಜಿ.ಎಚ್.ಶ್ರೀನಿವಾಸ್, ಜಿಲ್ಲಾಧಿಕಾರಿ ಮೀನಾ ನಾಗರಾಜು, ಜಿ.ಪಂ. ಸಿಇಓ ಕೀರ್ತನಾ, ಎಸ್ಪಿ ಡಾ.ವಿಕ್ರಮ ಅಮಟೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.