ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೂನ್ 4, 2025ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಐಪಿಎಲ್ ವಿಜಯೋತ್ಸವದ ವೇಳೆ ಸಂಭವಿಸಿದ ದುರಂತದಲ್ಲಿ 11 ಮಂದಿ ಅಭಿಮಾನಿಗಳು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ಕಾರಣದಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಜೂನ್ 14ರಂದು ನಡೆದ BCCI ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ನೇತೃತ್ವದ ಮೂರು ಸದಸ್ಯರ ಸಮಿತಿ ರಚನೆಯಾಗಿದ್ದು, ಹೊಸ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಈ ನಿಯಮಗಳಂತೆ, ಯಾವುದೇ ಫ್ರಾಂಚೈಸಿ ತಂಡ ತನ್ನ ಗೆಲುವನ್ನು ಸಾರ್ವಜನಿಕವಾಗಿ ಆಚರಿಸಲು ಬಯಸಿದರೆ ಬಿಸಿಸಿಐನ ಲಿಖಿತ ಅನುಮತಿ ಕಡ್ಡಾಯವಾಗಿದೆ.
ಇನ್ನು ಮುಂದೆ ಗೆಲುವಿನ 3-4 ದಿನಗಳೊಳಗೆ ತುರ್ತು ಸಂಭ್ರಮಾಚರಣೆ ನಡೆಸುವುದು ನಿರ್ಬಂಧಿತವಾಗಿದ್ದು, ಕಾರ್ಯಕ್ರಮ ಆಯೋಜನೆಗೆ ಸ್ಥಳೀಯ ಪೊಲೀಸ್ ಇಲಾಖೆ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತದ ಅನುಮತಿ ಅವಶ್ಯಕವಾಗಿದೆ. ಜೊತೆಗೆ, 4-5 ಹಂತದ ಭದ್ರತಾ ವ್ಯವಸ್ಥೆ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚನೆ ನೀಡಲಾಗಿದೆ.
ಈ ಕ್ರಮಗಳ ಮೂಲಕ ಬಿಸಿಸಿಐ, ಕ್ರಿಕೆಟ್ ಗೆ ಜವಾಬ್ದಾರಿಯುತ ಚಿತ್ರಣ ನೀಡಲು ಮುಂದಾಗಿದೆ. RCB ಘಟನೆಯ ಬಳಿಕ ಸಂಬಂಧಿಸಿದ ಇವೆಂಟ್ ಆಯೋಜಕರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಬಿಸಿಸಿಐ ಕ್ರಮ ವಹಿಸಿದೆ.