ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಳು ವರ್ಷಗಳ ಬಳಿಕ ರಾಜ್ಯ ಸರ್ಕಾರ ಕನ್ನಡ ಧ್ವಜಕ್ಕೆ ಮತ್ತೆ ಹಕ್ಕು ಮಂಡಿಸಿದ್ದು, ಹಳದಿ-ಕೆಂಪು ಬಾವುಟಕ್ಕೆ ಅಧಿಕೃತ ಮಾನ್ಯತೆ ಕೊಡುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಚಾರವಾಗಿ ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಶಿವರಾಜ ತಂಗಡಗಿ, ‘ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬರೀ ಹೆಸರಿಗೆ ಮಾತ್ರ ಇದೆ. ಈಗಿರುವ ಕನ್ನಡದ ಬಾವುಟ ಅಧಿಕೃತ ಅಲ್ಲ. ಅದೇ ಬಾವುಟ ಅಧಿಕೃತಗೊಳಿಸಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ’ ಎಂದು ತಿಳಿಸಿದರು.
ಅಂತೆಯೇ ಶೀಘ್ರದಲ್ಲೇ ತಂಗಡಗಿ ನೇತೃತ್ವದ ನಿಯೋಗ ದೆಹಲಿಗೆ ತೆರಳಲಿದ್ದು, ಕೇಂದ್ರದ ಸಂಸ್ಕೃತಿ ಸಚಿವರ ಭೇಟಿ ಮಾಡಲಿದ್ದಾರೆ. ಆ ಮೂಲಕ ಕನ್ನಡ ಬಾವುಟಕ್ಕೆ ಅಧಿಕೃತತೆ ಹಾಗೂ ಶಾಸ್ತ್ರೀಯ ಭಾಷೆ ಅನುದಾನ ಕೋರಿ ಮನವಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.