ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆಯ ಅಬ್ಬರ ಹೆಚ್ಚಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ವಿಶೇಷವಾಗಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ಮುಂದಿನ ಐದು ದಿನಗಳವರೆಗೆ ಮಳೆಯ ಮುನ್ಸೂಚನೆ ನೀಡಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಮಂಗಳೂರು ಮತ್ತು ಬಂಟ್ವಾಳ ತಾಲೂಕಿನ ಎಲ್ಲಾ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್
ಕರ್ನಾಟಕದ ಕರಾವಳಿ ಭಾಗದಲ್ಲಿ ಬಂಗಾಳಕೊಲ್ಲಿಯಲ್ಲಿ ಸೈಕ್ಲೋನ್ ಪರಿಣಾಮವಾಗಿ ವಾಯುಭಾರ ಕುಸಿತ ಉಂಟಾಗಿದ್ದು, ಈ ಕಾರಣದಿಂದ ಮುಂದಿನ ಐದು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಏಳು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ
ಕರಾವಳಿ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇರುವ ಕಾರಣದಿಂದಾಗಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಮಳೆ ಮತ್ತು ಗಾಳಿಯ ಪ್ರಭಾವ ಪ್ರಬಲವಾಗಿದ್ದು, ಯಾವುದೇ ಅನಾಹುತ ತಪ್ಪಿಸಿಕೊಳ್ಳಲು ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ತಿಳಿಸಿದೆ.