ಟಾಲಿವುಡ್‌ನ ಖ್ಯಾತ ಹಾಸ್ಯನಟ ಫಿಶ್ ವೆಂಕಟ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟಾಲಿವುಡ್‌ನ ಜನಪ್ರಿಯ ಹಾಸ್ಯನಟ ಫಿಶ್ ವೆಂಕಟ್ (ಮೂಲ ಹೆಸರು ಮಂಗಳಂಪಲ್ಲಿ ವೆಂಕಟೇಶ್) ಅವರು 53ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮೂತ್ರಪಿಂಡ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಕಳೆದ ಕೆಲ ದಿನಗಳಿಂದ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ವೈದ್ಯರ ಪ್ರಕಾರ, ಫಿಶ್ ವೆಂಕಟ್ ಅವರ ಎರಡೂ ಮೂತ್ರಪಿಂಡಗಳು ವಿಫಲಗೊಂಡಿದ್ದು, ಡಯಾಲಿಸಿಸ್ ಹಾಗೂ ವೆಂಟಿಲೇಟರ್‌ ಸಹಾಯದಿಂದ ಆರೋಗ್ಯವನ್ನು ಉಳಿಸಲು ಹಲವು ಪ್ರಯತ್ನಗಳು ನಡೆದವು. ಆದರೆ, ಅವರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಹೋಯಿತು. ಕೊನೆಗೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಮುಶೀರಾಬಾದ್ ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಮಾಡುವ ಮೂಲಕ ಅವರು ‘ಫಿಶ್ ವೆಂಕಟ್’ ಎಂದು ಪ್ರಸಿದ್ಧರಾದರು. ಅವರು ಎನ್ಟಿಆರ್ ನಾಯಕನಾಗಿ ನಟಿಸಿದ ‘ಆಧಿ’ ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದರು. ಆ ಚಿತ್ರದಲ್ಲಿನ ” ತೋಡಕೊಟ್ಟು ಚಿನ್ನ ” ಎಂಬ ಸಂಭಾಷಣೆಯಿಂದ ಬಹಳ ಜನಪ್ರಿಯರಾದರು.

ನಂತರ ‘ಬನ್ನಿ’, ‘ದಿಲ್’, ‘ಅತ್ತಾರಿಂಟಿಕಿ ದಾರೇದಿ’, ‘ಗಬ್ಬರ್ ಸಿಂಗ್’, ‘ಡಿಜೆ ಟಿಲ್ಲು’ ಸೇರಿದಂತೆ 100 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಹಾಸ್ಯ ಶೈಲಿಯಿಂದ ಪ್ರೇಕ್ಷಕರನ್ನು ಮನಗೆದ್ದಿದ್ದರು. ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ಅವರು, ಖಳನಾಯಕನ ಜೊತೆಗೆ ಸಪೋರ್ಟ್ ರೋಲ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ಪಡೆದುಕೊಂಡಿದ್ದಾರೆ.

ಇತ್ತೀಚೆಗೆ, ಅವರ ಮಗಳ ಆರೋಗ್ಯ ಸಮಸ್ಯೆ ಕಾರಣವಾಗಿ ಅವರು ಮಾಧ್ಯಮಗಳ ಮೂಲಕ ಆರ್ಥಿಕ ನೆರವಿಗಾಗಿ ಮನವಿ ಮಾಡಿದ್ದರು. ವೈದ್ಯರು ಎರಡೂ ಮೂತ್ರಪಿಂಡಗಳ ಕಸಿ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಹೇಳಿದ್ದು, ಶಸ್ತ್ರಚಿಕಿತ್ಸೆಗಾಗಿ ಸುಮಾರು 50 ಲಕ್ಷ ವೆಚ್ಚವಿದೆ ಎಂಬ ಮಾಹಿತಿ ನೀಡಲಾಗಿತ್ತು. ಇದರಿಂದಾಗಿ ಹಲವಾರು ಹಿತೈಷಿಗಳು ಹಾಗೂ ಸಿನಿ ತಾರೆಯರು ನೆರವು ನೀಡಿದ್ದರು. ಪವನ್ ಕಲ್ಯಾಣ್ ಕೂಡ 2 ಲಕ್ಷ ನೆರವು ನೀಡಿದ್ದ ಬಗ್ಗೆ ವರದಿಯಾಗಿದೆ.

ಅವರ ನಿಧನದಿಂದ ಟಾಲಿವುಡ್‌ನಲ್ಲಿ ದುಃಖದ ವಾತಾವರಣ ಮನೆಮಾಡಿದ್ದು, ಅನೇಕ ಚಲನಚಿತ್ರ ನಟರು, ತಂತ್ರಜ್ಞರು ಮತ್ತು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!