ಹವಾಮಾನದಲ್ಲಿ ತೀವ್ರ ಬದಲಾವಣೆ ಕಾಣಿಸಿಕೊಳ್ಳುತ್ತಿರುವ ಈ ದಿನಗಳಲ್ಲಿ ಜನರಲ್ಲಿ ಆರೋಗ್ಯ ಸಮಸ್ಯೆಗಳಷ್ಟೆ ಅಲ್ಲ, ಚರ್ಮ ಸಂಬಂಧಿತ ತೊಂದರೆಗಳೂ ಹೆಚ್ಚುತ್ತಿವೆ. ಚಳಿ ಅಥವಾ ಶೀತಗಾಳಿ ಹೆಚ್ಚಾದಾಗ ಚರ್ಮವು ತಕ್ಷಣ ಒಣಗುತ್ತಿದ್ದು, ಕೈ, ಮುಖ ಮತ್ತು ಪಾದಗಳಲ್ಲಿ ಉರಿ, ಒಣತನ ಹೆಚ್ಚಾಗಿ ಅನುಭವವಾಗುತ್ತದೆ. ಇಂಥ ಸಂದರ್ಭದಲ್ಲಿ ಚರ್ಮದ ತೇವಾಂಶ ಕಾಪಾಡುವುದು ಅತ್ಯಗತ್ಯವಾಗಿದೆ. ನಿತ್ಯದ ಆರೈಕೆ ಪಾಲನೆಯ ಮೂಲಕ ಈ ತೊಂದರೆಗಳನ್ನು ತಡೆಹಿಡಿಯಬಹುದು.
ಚರ್ಮದ ತೇವಾಂಶ ಕಾಪಾಡಿಕೊಳ್ಳಲು ಹೈಡ್ರೇಷನ್ ಬಹಳ ಮುಖ್ಯವಾಗಿದ್ದು, ದಿನಪೂರ್ತಿ ಸಮರ್ಪಕವಾದ ನೀರಿನ ಸೇವನೆಯೊಂದಿಗೆ ಸೂಕ್ತ ಆರೈಕೆ ಕ್ರಮಗಳನ್ನು ಮಾಡಬೇಕು.
ಅಡುಗೆ ಮನೆಯಲ್ಲಿ ಸಿಗೋ ಕಡಲೆ ಹಿಟ್ಟು ಈ ಸಂದರ್ಭದಲ್ಲಿ ನಿಜವಾದ ರಕ್ಷಣಾತ್ಮಕ ಪಾತ್ರ ವಹಿಸುತ್ತದೆ. ಸ್ನಾನದ ಮೊದಲು ಕಡಲೆ ಹಿಟ್ಟನ್ನು ಹಾಲಿನ ಕೆನೆ ಅಥವಾ ಹಾಲಿನೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದು ಉತ್ತಮ ವಿಧಾನ. ಕಡಲೆ ಹಿಟ್ಟಿನಲ್ಲಿ ಮೃದುವಾದ ಸ್ಕ್ರಬ್ಬಿಂಗ್ ಗುಣವಿದ್ದು, ಇದು ಚರ್ಮದ ಮೇಲೆ ಇದ್ದ ಒಣ ತ್ವಚೆಯನ್ನು ತೆಗೆಯುತ್ತದೆ. ಹಾಲಿನ ಕೆನೆ ತೇವಾಂಶವನ್ನು ನೀಡುತ್ತದೆ ಹಾಗೂ ಚರ್ಮವನ್ನು ತಾಜಾಗೊಳಿಸುತ್ತದೆ.
ಅದೇ ರೀತಿ ಹಾಲು ಇಲ್ಲದಿದ್ದರೆ, ಜೇನುತುಪ್ಪವನ್ನು ಬೆರೆಸಿ ಬಳಸಬಹುದು. ಇವು ಚರ್ಮವನ್ನು ಪೋಷಿಸುವ ಜೊತೆಗೆ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಎಣ್ಣೆಯುಕ್ತ ಚರ್ಮ ಹೊಂದಿರುವವರು ಮೊಸರನ್ನು ಬಳಸಿಕೊಂಡು ಈ ಮಿಶ್ರಣವನ್ನು ರೂಪಿಸಬಹುದು. ಇದನ್ನು ಹಚ್ಚಿ 15 ನಿಮಿಷ ಹಾಗೆಯೇ ಬಿಡಬೇಕು. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದು, ಮಾಯಿಶ್ಚರೈಸರ್ ಹಚ್ಚುವುದು ಸೂಕ್ತ.
ಚರ್ಮದ ಆರೈಕೆಯಲ್ಲಿ ಈ ವಿಧಾನವನ್ನು ನಿಯಮಿತವಾಗಿ ಅಳವಡಿಸಿಕೊಳ್ಳುವುದರಿಂದ, ಚರ್ಮದಲ್ಲಿ ತಾಜಾತನ ಹಾಗೂ ನೈಸರ್ಗಿಕ ಕಾಂತಿ ಕಾಣಸಿಗುತ್ತದೆ. ಈ ಋತುವಿನಲ್ಲಿ ರಾಸಾಯನಿಕ ಉತ್ಪನ್ನಗಳ ಬಳಕೆಯನ್ನು ಬಿಟ್ಟು, ನೈಸರ್ಗಿಕ ಪರಿಹಾರಗಳತ್ತ ಮುಖ ಮಾಡುವುದು ಆರೋಗ್ಯದ ದೃಷ್ಟಿಯಿಂದ ಕೂಡ ಬಹಳಷ್ಟು ಲಾಭದಾಯಕ.