ಮಳೆಗಾಲದಲ್ಲಿ ಒದ್ದೆ ದಾರಿಗಳು, ಕೆಸರು ಮತ್ತು ಕೊಳಚೆ ನೀರು ಕಂಡುಬರುವುದು ಸಾಮಾನ್ಯ. ಇದರಿಂದಾಗಿ ಬಹುತೇಕ ಜನರು ಪಾದದ ಸಮಸ್ಯೆಗಳಿಂದ ಬಳಲುತ್ತಾರೆ. ಇದರಲ್ಲಿ ಪ್ರಮುಖವಾಗಿ ಕಾಲ್ಬೆರಳಿನ ಮಧ್ಯೆ ಉಂಟಾಗುವ ಅಲರ್ಜಿ, ತುರಿಕೆ, ನಂಜು ಮತ್ತು ಶಿಲೀಂಧ್ರದ ಸೋಂಕುಗಳು. ಇವುಗಳು ತಕ್ಷಣವೇ ಚಿಕಿತ್ಸೆ ಪಡೆಯದಿದ್ದರೆ ತೀವ್ರ ಸೋಂಕಿಗೆ ಕಾರಣವಾಗಬಹುದು. ಆದರೆ, ಮನೆಯಲ್ಲಿಯೇ ಕೆಲವೊಂದು ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಈ ತೊಂದರೆಗಳನ್ನು ನಿಯಂತ್ರಿಸಬಹುದು.
ಅಡುಗೆ ಸೋಡಾ ಬಳಸಿ ತುರಿಕೆ ನಿವಾರಣೆ: ದಿನನಿತ್ಯ ಅಡುಗೆಯಲ್ಲಿ ಬಳಸುವ ಸೋಡಾ, ಪಾದದ ತುರಿಕೆ ನಿವಾರಣೆಗೆ ಬಹಳ ಪರಿಣಾಮಕಾರಿ. ಒಂದು ಬಟ್ಟಲಿನ ಬಿಸಿ ನೀರಿಗೆ 2 ಚಮಚ ಅಡುಗೆ ಸೋಡಾ ಹಾಕಿ, ಪಾದಗಳನ್ನು ಸುಮಾರು 20 ನಿಮಿಷ ಇರಿಸಿ. ಇದರಿಂದ ತುರಿಕೆ ಕಡಿಮೆಯಾಗಿ, ಶಿಲೀಂಧ್ರ ಸೋಂಕು ಹರಡುವುದನ್ನು ತಡೆಯುತ್ತದೆ.
ತೆಂಗಿನೆಣ್ಣೆ ಹಚ್ಚುವುದು: ಆಂಟಿಫಂಗಲ್ ಗುಣವಿರುವ ತೆಂಗಿನೆಣ್ಣೆ, ಕಾಲಿನ ಬೆರಳಿನ ಮಧ್ಯೆ ಕಂಡುಬರುವ ತುರಿಕೆಗೆ ಉತ್ತಮ ಪರಿಹಾರ. ರಾತ್ರಿ ಮಲಗುವ ಮೊದಲು ತೆಂಗಿನೆಣ್ಣೆ ಹಚ್ಚಿ ಮಲಗಿದರೆ ಸೋಂಕು ನಿಯಂತ್ರಣಕ್ಕೆ ಬರುತ್ತದೆ.
ಬೇವಿನ ಎಲೆ: ಬೇವಿನ ಎಲೆಗಳಲ್ಲಿ ಶಕ್ತಿಶಾಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ. ಎಲೆಗಳನ್ನು ನೀರಿನಲ್ಲಿ ಕುದಿಸಿ, ತಣ್ಣಗಾದ ನೀರಿನಲ್ಲಿ ಪಾದಗಳನ್ನು ಇಡುವುದರಿಂದ ತುರಿಕೆ ಸಮಸ್ಯೆಗಳನ್ನು ನಿಯಂತ್ರಿಸಬಹುದು.
ಪಾದಗಳನ್ನು ಯಾವ ರೀತಿರಕ್ಷಿಸಬೇಕು?
ಮಳೆಗಾಲದಲ್ಲಿ ಪಾದವನ್ನು ಪ್ರತಿದಿನ ಚೆನ್ನಾಗಿ ತೊಳೆಯಬೇಕು. ಮಳೆಯಲ್ಲಿ ನೆನೆದ ನಂತರ ಉಗುರುಬಿಸಿ ನೀರಿನಲ್ಲಿ ಸೋಪ್ ಬಳಸಿ ತೊಳೆಯುವುದು ಉತ್ತಮ. ಪಾದದ ಬೆರಳಿನ ಮಧ್ಯೆ ನೀರು ನಿಲ್ಲದಂತೆ ಟವಲ್‌ನಿಂದ ಒಣಗಿಸಬೇಕು. ತೇವಾಂಶ ಉಳಿದರೆ ಶಿಲೀಂಧ್ರ ಸೋಂಕಿಗೆ ಅವಕಾಶವಿರುತ್ತದೆ.
ಮಾಯಿಶ್ಚರೈಸರ್ ಬಳಕೆ ಮತ್ತು ಉಗುರುಗಳ ಆರೈಕೆ: ಪಾದ ಚರ್ಮಕ್ಕೆ ತಕ್ಕ ಮಾಯಿಶ್ಚರೈಸರ್ ಬಳಸುವುದು ಮುಖ್ಯ. ಬೆವರು ಹೆಚ್ಚು ಆಗುವವರಿಗೆ ಆಂಟಿಫಂಗಲ್ ಪೌಡರ್ ಬಳಸಬಹುದು. ಕಾಲಿನ ಉಗುರುಗಳನ್ನು ನಿಯಮಿತವಾಗಿ ಕತ್ತರಿಸಿ ಕೊಳಚೆ ಕಟ್ಟಿ ಕೊಳ್ಳದಂತೆ ನೋಡಿಕೊಳ್ಳಬೇಕು.
ಬರಿಗಾಲಿನಲ್ಲಿ ಹೊರ ಹೋಗದಿರಿ: ಕೊಳಚೆ ನೀರಿರುವ ಪ್ರದೇಶಗಳಲ್ಲಿ ಶೂ ಧರಿಸದೆ ಹೋಗುವುದು ಶಿಲೀಂಧ್ರ ಸೋಂಕಿಗೆ ಆಹ್ವಾನ ನೀಡಿದಂತಾಗುತ್ತದೆ. ಹೀಗಾಗಿ ಯಾವಾಗಲೂ ಪಾದರಕ್ಷಕಗಳನ್ನು ಧರಿಸುವುದು ಮುಖ್ಯ. ಹೊರಗಡೆ ಹೋಗಿ ಬಂದು ತುರಿಕೆ ಕಂಡುಬಂದರೆ ತಕ್ಷಣ ನಂಜು ನಿವಾರಕ ಕ್ರೀಮ್ ಹಚ್ಚಬೇಕು.
ಮಳೆಗಾಲದಲ್ಲಿ ಕಾಲ್ಬೆರಳಿನ ನಡುವಿನ ತುರಿಕೆ ಮತ್ತು ನಂಜು ಸಮಸ್ಯೆ ಸಾಮಾನ್ಯವಾದರೂ, ಸರಿಯಾದ ಪಾದ ಆರೈಕೆ, ಮನೆಮದ್ದು ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವುದರಿಂದ ಈ ಸಮಸ್ಯೆಯನ್ನು ತಡೆಯಲು ಸಾಧ್ಯ.