ಹೊಸದಿಗಂತ ವರದಿ ಬೀದರ್:
ಇಲ್ಲಿಯ ಐತಿಹಾಸಿಕ ಗುರುದ್ವಾರ ನಾನಕ ಝರಾದಲ್ಲಿ ಸರಣಿ ಬಾಂಬ್ ಸ್ಫೋಟ ಮಾಡುವುದಾಗಿ ಇ-ಮೇಲ್ ಪತ್ರ ಬಂದಿದ್ದು, ಕೆಲಕಾಲ ಆತಂಕ ಸೃಷ್ಟಿಸಿತು.
ಇಲ್ಲಿನ ಗುರುದ್ವಾರ ಪ್ರಮುಖ ಮಂದಿರ, ಯಾತ್ರಿ ನಿವಾಸ, ಅಮೃತ ಕುಂಡ ಇತರೆಡೆ ಐಇಡಿಯನ್ನು ಬಳಸಿ ಶುಕ್ರವಾರ ಸ್ಫೋಟ ಮಾಡುವುದಾಗಿ ಗುರುದ್ವಾರ ಮಂಡಳಿಗೆ ಗುರುವಾರ ರಾತ್ರಿ ಬೆದರಿಕೆ ಮೇಲ್ ಬಂದಿದೆ. ವಕೀಲ ಅಲೀಂ ಅಲ್ ಬುಹಾರಿ ಎಂಬ ವ್ಯಕ್ತಿ ಮೇಲ್ ರವಾನಿಸಿದ್ದಾನೆ. ಪಾಕಿಸ್ತಾನದ ಐಎಸ್ ಐ ನೆರವಿನಿಂದ ಸ್ಫೋಟದ ಸಂಚು ರೂಪಿಸಿರುವ ಬಗ್ಗೆಯೂ ತಿಳಿಸಿದ್ದಾನೆ. ಮೇಲ್ ಸ್ವೀಕರಿಸಿದ ಬಳಿಕ ಗುರುದ್ವಾರ ಆಡಳಿತ ಮಂಡಳಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದೆ. ತಕ್ಷಣ ಕಾರ್ಯಪ್ರವತ್ತ ಪೊಲೀಸ್ ತಂಡ ಗುರುದ್ವಾರಕ್ಕೆ ದೌಡಾಯಿಸಿ ತಪಾಸಣೆ ನಡೆಸಿದೆ. ಗುರುದ್ವಾರ ಪರಿಸರದಲ್ಲಿ ಯಾವುದೇ ಸ್ಫೋಟಕವಿಲ್ಲ. ಮೇಲ್ ಮುಖಾಂತರ ಹುಸಿ ಬೆದರಿಕೆ ಹಾಕಿ ಆತಂಕ ಸೃಷ್ಟಿಸುವ ಕೆಲಸ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕಾಡ್ ಸೇರಿ ವಿಶೇಷ ತಂಡದ ಐವತ್ತಕ್ಕೂ ಹೆಚ್ಚು ಸಿಬ್ಬಂದಿ ಗುರುದ್ವಾರದಲ್ಲಿ ಸುದೀರ್ಘ ಕಾಲ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಇಲ್ಲಿ ಯಾವುದೇ ತರಹದ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಸಾದಿಕ್ ಕಳಿಸಿದ ಮೇಲ್ ನಲ್ಲಿ ತಮಿಳುನಾಡಿನಲ್ಲಿ ಇತ್ತೀಚೆಗೆ ಬಂಧಿತನಾದ ಡ್ರಗ್ಸ್ ಸ್ಮಗ್ಲರ್ ಜಾಫರ್ ಸಾದಿಕ್, ಕೃತಿಗಾ ಉದಯನಿಧಿ ಹೆಸರು ಸಹ ಉಲ್ಲೇಖವಾಗಿದೆ. ಇವರ ಪ್ರಕರಣದ ಗಮನ ಬೇರೆಡೆ ಸೆಳೆಯಲು ಗುರುದ್ವಾರ ಬ್ಲಾಸ್ಟ್ ಸಂಚು ಹೆಣೆಯಲಾಗಿದೆ. ಭಕ್ತರ ಮೈಕ್ರೋ ಮೊಬೈಲ್ ಫೋನ್ ಸಿಗ್ನಲ್ ಬಳಸಿ ಶುಕ್ರವಾರ ಸ್ಫೋಟ ನಡೆಸಲು ಸಿದ್ಧತೆ ಮಾಡಲಾಗಿದೆ ಎಂದು ಬೆದರಿಕೆ ಹಾಕಲಾಗಿತ್ತು.
ಬಾಂಬ್ ಬ್ಲಾಸ್ಟ್ ಬೆದರಿಕೆ ಮೇಲ್ ಬಂದ ಸುದ್ದಿಯಿಂದಾಗಿ ಗುರುನಾನಕನಲ್ಲಿ ಒಂದಿಷ್ಟು ಆತಂಕ ಸೃಷ್ಟಿಯಾಗಿತ್ತು. ಭಕ್ತರು ಸಹ ಗೊಂದಲಕ್ಕೆ ಸಿಲುಕಿದ್ದರು. ಆದರೆ ಸಮಗ್ರ ತಪಾಸಣೆ ಬಳಿಕ ಇದೊಂದು ಪಕ್ಕಾ ಹುಸಿ ಕರೆ ಎಂಬುದು ಸ್ಪಷ್ಟವಾಗಿದೆ. ಆದಾಗ್ಯೂ ಪೊಲೀಸರು ಮೇಲ್ ಸಂಬಂಧ ತನಿಖೆ ಕೈಗೊಂಡಿದ್ದಾರೆ.
ಬಾಂಬ್ ಬೆದರಿಕೆ ಮೇಲ್ ಬಂದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸಮಗ್ರ ಪರಿಶೀಲನೆ ಬಳಿಕ ಇದೊಂದು ಹುಸಿ ಮೇಲ್ ಎಂಬುದು ಖಚಿತವಾಗಿದೆ. ಭಕ್ತರು, ಪ್ರವಾಸಿಗರು ಆತಂಕಪಡುವ ಅಗತ್ಯವಿಲ್ಲ. ನಿರ್ಭಿತಿಯಿಂದ ಎಂದಿನಂತೆ ಗುರುದ್ವಾರಕ್ಕೆ ಆಗಮಿಸಬೇಕು. ಗುರುದ್ವಾರದಲ್ಲಿ ನಿತ್ಯದ ಚಟುವಟಿಕೆಗಳು ಯಥಾವತ್ತಾಗಿ ನಡೆದಿವೆ ಎಂದು ಗುರುದ್ವಾರ ನಾನಕ ಝರಾ ಸಮಿತಿ ಅಧ್ಯಕ್ಷ ಸರ್ದಾರ್ ಬಲಬೀರಸಿಂಗ್ ತಿಳಿಸಿದ್ದಾರೆ.