ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೂನ್ 12 ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ಎಐ-171 ವಿಮಾನ ದುರಂತದ ಬಳಿಕ, ಟಾಟಾ ಸನ್ಸ್ ಹಾಗೂ ಟಾಟಾ ಟ್ರಸ್ಟ್‌ಗಳು ಮೌಲಿಕ ಜವಾಬ್ದಾರಿಯ ಕ್ರಮ ಕೈಗೊಂಡಿದ್ದು, ಶುಕ್ರವಾರ ‘ದಿ AI-171 ಮೆಮೋರಿಯಲ್ ಆಂಡ್ ವೆಲ್‌ಫೇರ್ ಟ್ರಸ್ಟ್’ ಎಂಬ ಹೊಸ ಟ್ರಸ್ಟ್ ಸ್ಥಾಪನೆ ಮಾಡಿದ್ದಾರೆ. ಈ ಟ್ರಸ್ಟ್ ಸಂತ್ರಸ್ತರ ಕುಟುಂಬಗಳಿಗೆ ದೀರ್ಘಕಾಲೀನ ಬೆಂಬಲ ಒದಗಿಸುವ ಗುರಿಯನ್ನು ಹೊಂದಿದ್ದು, ಎರಡು ಸಂಸ್ಥೆಗಳು ತಲಾ 250 ಕೋಟಿ ರು. ಸೇರಿ ಒಟ್ಟು 500 ಕೋಟಿ ಕೊಡುಗೆಯಾಗಿ ನೀಡಿವೆ.
ಪ್ರತಿ ಕುಟುಂಬಕ್ಕೆ 1 ಕೋಟಿ ಪರಿಹಾರ
ಈ ವಿಮಾನ ದುರಂತದಲ್ಲಿ 260 ಮಂದಿ ಬಲಿಯಾಗಿದ್ದು ಇದರಲ್ಲಿ ವಿಮಾನದಲ್ಲಿದ್ದ 241 ಪ್ರಯಾಣಿಕರು ಹಾಗೂ ಹಾಸ್ಟೆಲ್ ನಲ್ಲಿದ್ದ 19 ಜನರು ಸೇರಿದ್ದಾರೆ. ಟ್ರಸ್ಟ್ ಪ್ರಕಾರ, ಪ್ರತಿಯೊಬ್ಬ ಮೃತರ ಕುಟುಂಬಕ್ಕೆ1 ಕೋಟಿ ರೂ. ಪರಿಹಾರ ನೀಡಲಾಗುತ್ತದೆ. ಗಂಭೀರವಾಗಿ ಗಾಯಗೊಂಡವರಿಗೆ ತುರ್ತು ವೈದ್ಯಕೀಯ ನೆರವು ಕೂಡ ಒದಗಿಸಲಾಗುತ್ತದೆ.
ವಿಮಾನ ಅಪಘಾತದಿಂದ ಹಾನಿಯಾದ ಅಹಮದಾಬಾದ್ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಪುನರ್ ನಿರ್ಮಾಣಕ್ಕೂ ಈ ಟ್ರಸ್ಟ್ ನೆರವು ನೀಡಲಿದೆ. ಇದೇ ಜೊತೆಗೆ, ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ವೈದ್ಯರು, ಸಿಬ್ಬಂದಿ ಹಾಗೂ ಸಾಮಾಜಿಕ ಕಾರ್ಯಕರ್ತರಿಗೂ ಮಾನಸಿಕ ಆರೋಗ್ಯ ಮತ್ತು ಆರ್ಥಿಕ ನೆರವು ಒದಗಿಸಲಾಗುವುದು.
ಸಂತ್ರಸ್ತ ಕುಟುಂಬಗಳ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಸೇವೆ, ಮತ್ತು ದಿನನಿತ್ಯದ ಅಗತ್ಯಗಳಿಗೆ ಸಹಾಯವನ್ನು ಟ್ರಸ್ಟ್ ನಿರಂತರವಾಗಿ ಒದಗಿಸಲಿದೆ. ಇದರೊಂದಿಗೆ ಕುಟುಂಬಗಳ ಮೇಲೆ ಬಿದ್ದಿರುವ ಆರ್ಥಿಕ ಹಾಗೂ ಸೈಕೋಲಾಜಿಕಲ್ ಒತ್ತಡವನ್ನು ತಗ್ಗಿಸುವ ಪ್ರಯತ್ನವೂ ಆಗಲಿದೆ.
ಈ ಟ್ರಸ್ಟ್ ಐದು ಸದಸ್ಯರ ಆಡಳಿತ ಮಂಡಳಿಯಿಂದ ನಿರ್ವಹಿಸಲಾಗುತ್ತದೆ. ಪ್ರಸ್ತುತ ಟಾಟಾ ಗ್ರೂಪ್‌ನ ಮಾಜಿ ಉನ್ನತಾಧಿಕಾರಿ ಎಸ್. ಪದ್ಮನಾಭನ್ ಮತ್ತು ಟಾಟಾ ಸನ್ಸ್‌ನ ಕಾನೂನು ಸಲಹೆಗಾರ ಸಿದ್ಧಾರ್ಥ್ ಶರ್ಮಾ ಅವರನ್ನು ಟ್ರಸ್ಟಿಗಳಾಗಿ ನೇಮಕ ಮಾಡಲಾಗಿದೆ. ಉಳಿದ ಮೂವರು ಟ್ರಸ್ಟಿಗಳನ್ನು ಶೀಘ್ರದಲ್ಲೇ ನೇಮಿಸಲಾಗುವುದು ಎಂದು ಮೂಲಗಳು ತಿಳಿಸಿವೆ.