ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಶಾಲಾ ವ್ಯಾನ್ ಚಾಲಕನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಈ ಕೃತ್ಯ ಜುಲೈ 14ರಂದು ಸಂಭವಿಸಿದ್ದು, ಶಾಲೆಯಿಂದ ಮನೆಗೆ ಬಂದ ಬಾಲಕಿ ತನ್ನ ತಾಯಿಗೆ ಸಂಪೂರ್ಣ ಘಟನೆ ವಿವರಿಸಿದ್ದಾಳೆ. ತಕ್ಷಣವೇ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯು ಮೊಹಮ್ಮದ್ ಆರಿಫ್ ಖಾನ್ ಎಂದು ಗುರುತಿಸಲಾಗಿದೆ.
‘ಈ ವಿಷಯವನ್ನು ನಾನು ಶಾಲೆಗೆ ತಿಳಿಸಿದ್ದೆ. ಆದರೆ ಶಾಲಾ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ. ಚಾಲಕನ ವಿರುದ್ಧ ಮಾತನಾಡಿದ ಕಾರಣ ಅವನು ನಮಗೆ ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ಬೆದರಿಕೆ ಹಾಕಿದ್ದಾನೆ’ ಎಂದು ಮಗುವಿನ ತಾಯಿ ದೂರಿದ್ದಾರೆ.
ಈ ಬಗ್ಗೆ ಮಾತನಾಡಿದ ಇಂದಿರಾ ನಗರ ಠಾಣೆಯ ಉಸ್ತುವಾರಿ ಅಧಿಕಾರಿ ಸುನಿಲ್ ತಿವಾರಿ, ಬಾಲಕಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಯನ್ನು ಸರ್ವೋದಯ ನಗರದ ಕಲ್ಯಾಣ್ ಅಪಾರ್ಟ್‌ಮೆಂಟ್ ಬಳಿಯಿಂದ ಬಂಧಿಸಲಾಗಿದೆ. ಶಾಲಾ ಆಡಳಿತ ಮಂಡಳಿಯ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.