ಹೊಸದಿಗಂತ ಡಿಜಿಟಲ್ ಡೆಸ್ಕ್:
20 ವರ್ಷಗಳ ಕಾಲ ಕೋಮಾ ಸ್ಥಿತಿಯಲ್ಲಿದ್ದ ಸೌದಿ ಅರೇಬಿಯಾದ ರಾಜಕುಮಾರ ಅಲ್ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ಅಲ್ ಸೌದ್ ನಿಧನರಾಗಿದ್ದಾರೆ. ‘ಸ್ಲೀಪಿಂಗ್ ಪ್ರಿನ್ಸ್’ ಎಂಬ ಹೆಸರಿನಲ್ಲಿ ವಿಶ್ವದ ಗಮನ ಸೆಳೆದಿದ್ದ ಈ ರಾಜಕುಮಾರನ ಅಂತ್ಯಕ್ರಿಯೆ ಭಾನುವಾರ ರಿಯಾದ್‌ನಲ್ಲಿರುವ ಖಾಸಗಿ ಮಸೀದಿಯಲ್ಲಿ ನೆರವೇರಲಿದೆ ಎಂದು ಅವರ ತಂದೆ ಪ್ರಿನ್ಸ್ ಖಾಲೀದ್ ಬಿನ್ ತಲಾಲ್ ಹೇಳಿದ್ದಾರೆ.
2005ರಲ್ಲಿ ಲಂಡನ್ ಮಿಲಿಟರಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ನಡೆದ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ತಕ್ಷಣವೇ ಕೋಮಾಗೆ ಜಾರಿದರು. ಅದರ ನಂತರ ಕಳೆದ ಎರಡು ದಶಕಗಳ ಕಾಲ ಅವರು ಕೋಮಾದಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದರು.
ಈ ಕುರಿತು ಮಾತನಾಡಿದ ಪ್ರಿನ್ಸ್ ಖಾಲೀದ್, “ಮಗನ ಸಾವು ಬದುಕು ದೇವರ ಇಚ್ಛೆ. ನಾವು ನಮ್ಮ ಕರ್ತವ್ಯವನ್ನು ನೆರವೇರಿಸಿದ್ದೇವೆ. ಅವನ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. ‘ಸ್ಲೀಪಿಂಗ್ ಪ್ರಿನ್ಸ್’ ಎಂಬ ಹೆಸರಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವೈದ್ಯಕೀಯ ವಲಯದಲ್ಲಿ ವಿಭಿನ್ನ ವ್ಯಕ್ತಿತ್ವ ಹೊಂದಿದ್ದ ಅಲ್ವಲೀದ್‌ರ ಸಾವಿಗೆ ವಿಶ್ವದಾದ್ಯಂತ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.