ಹೊಸದಿಗಂತ ಡಿಜಿಟಲ್ ಡೆಸ್ಕ್:
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಹಾಕಿದ್ದು, 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ಲಸಿಕೆ ನೀಡಲು ತೀರ್ಮಾನಿಸಿದೆ. ಈ ಯೋಜನೆಗೆ ಪ್ರಾಥಮಿಕ ಹಂತದಲ್ಲಿ ಗಣಿ ಪ್ರದೇಶಗಳು ಮತ್ತು ಕಲ್ಯಾಣ ಕರ್ನಾಟಕದ 20 ತಾಲೂಕುಗಳನ್ನು ಆಯ್ಕೆ ಮಾಡಲಾಗಿದೆ. ಈ ಲಸಿಕೆ ಯೋಜನೆಗೆ 9 ಕೋಟಿ ರೂಪಾಯಿ ವೆಚ್ಚವನ್ನು ಮೀಸಲಿರಿಸಲಾಗಿದೆ.
ತುಮಕೂರು, ಬಳ್ಳಾರಿ, ವಿಜಯನಗರ ಮತ್ತು ಚಿತ್ರದುರ್ಗ ಜಿಲ್ಲೆಗಳ ಒಳಗೊಂಡಿರುವ 20 ತಾಲೂಕುಗಳಲ್ಲಿ ಈ ಲಸಿಕೆ ಪ್ರಾಯೋಗಿಕವಾಗಿ ನೀಡಲಾಗುತ್ತಿದೆ. ಗಣಿ ಪ್ರದೇಶಗಳ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಪ್ರಮಾಣ ಹೆಚ್ಚಿರುವುದರಿಂದ ಪ್ರತ್ಯೇಕವಾಗಿಯೇ ಈ ಪ್ರದೇಶಗಳಿಗೆ ಆದ್ಯತೆ ನೀಡಲಾಗಿದೆ. ಆರೋಗ್ಯ ಇಲಾಖೆ ಈ ಯೋಜನೆ ಜಾರಿಗೆ ಸಿದ್ಧತೆ ನಡೆಸುತ್ತಿದ್ದು, ಸ್ಕೂಲ್ ಮಟ್ಟದಲ್ಲಿಯೇ ಮಕ್ಕಳಿಗೆ ಲಸಿಕೆ ನೀಡಲಾಗುವುದು.
ಎಚ್‌ಪಿವಿ ಲಸಿಕೆ ಎಂದರೇನು?
ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಲಸಿಕೆ, ಗರ್ಭಕಂಠದ ಕ್ಯಾನ್ಸರ್ ಸೇರಿದಂತೆ ಕೆಲ ಜನನಾಂಗ ಕ್ಯಾನ್ಸರ್‌ಗಳು ಮತ್ತು ನರಹುಣ್ಣುಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ. ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಎರಡನೇ ಅತಿ ಸಾಮಾನ್ಯ ಕ್ಯಾನ್ಸರ್ ಆಗಿದ್ದು, ವರ್ಷಕ್ಕೊಮ್ಮೆ ಲಕ್ಷಾಂತರ ಮಹಿಳೆಯರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. HPV ಸೋಂಕು ಸಾಮಾನ್ಯವಾಗಿ ಲೈಂಗಿಕ ಸಂಪರ್ಕದಿಂದ ಹರಡುವುದರಿಂದ, ಲೈಂಗಿಕವಾಗಿ ಸಕ್ರಿಯವಾಗುವ ಮೊದಲು ಲಸಿಕೆ ನೀಡುವುದು ಅತ್ಯಗತ್ಯವಾಗಿದೆ.
9ರಿಂದ 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಎರಡು ಡೋಸ್ (0 ಮತ್ತು 6 ತಿಂಗಳಲ್ಲಿ) ನೀಡಲಾಗುತ್ತದೆ. 15 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಪುರುಷರಿಗೆ ಮೂರು ಡೋಸ್ (0, 2 ಮತ್ತು 6 ತಿಂಗಳು) ನೀಡಲಾಗುವುದು. ಶೇ.80ರಷ್ಟು ಹೆಣ್ಣುಮಕ್ಕಳಿಗೆ ಲಸಿಕೆ ನೀಡಿದರೆ, ಗಂಡುಮಕ್ಕಳಿಗೂ HPV ಹರಡುವಿಕೆ ತಡೆಯಬಹುದು ಎಂಬುದು ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಿದೆ.
ಈ ಯೋಜನೆಯ ಯಶಸ್ಸು ಭವಿಷ್ಯದಲ್ಲಿ ಗರ್ಭಕಂಠದ ಕ್ಯಾನ್ಸರ್ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವಲ್ಲಿ ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.