ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಭಕ್ತರ ಅನುಕೂಲಕ್ಕಾಗಿ ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ಮಾಡಿದ್ದು, “ಶ್ರೀ ಶ್ರೀನಿವಾಸ ದಿವ್ಯಾನುಗ್ರಹ ಹೋಮ”ದ ಮೂಲಕ ವಿಶೇಷ ದರುಶನಕ್ಕೆ ಅವಕಾಶ ನೀಡಿದೆ.
ಜುಲೈ 25 ರಂದು ಬೆಳಗ್ಗೆ 10 ಗಂಟೆಗೆ ಈ ಸೇವೆಗೆ ಸಂಬಂಧಿಸಿದ 1600 ಮೌಲ್ಯದ ಟಿಕೆಟ್‌ಗಳನ್ನು ಆನ್ಲೈನ್ ಮೂಲಕ ಬಿಡುಗಡೆ ಮಾಡಲಾಗುತ್ತದೆ. ವಿಶೇಷವೆಂದರೆ, ಈ ಒಂದು ಟಿಕೆಟ್‌ನಲ್ಲಿ ಇಬ್ಬರು ಭಕ್ತರು ದರ್ಶನ ಪಡೆಯಬಹುದಾಗಿದೆ. ಟಿಕೆಟ್ ಬುಕ್ ಮಾಡಿದವರು ತಿರುಪತಿ ಅಲಿಪಿರಿಯಲ್ಲಿರುವ ಸಪ್ತಗೃಹಕ್ಕೆ ಹಾಜರಾಗಬೇಕಾಗುತ್ತದೆ.
ಭಕ್ತರು ಹೋಮದ ದಿನ ಬೆಳಗ್ಗೆ 9 ಗಂಟೆಯೊಳಗೆ ಹಾಜರಾಗಬೇಕು. ಹೋಮವು ಸುಮಾರು 11 ಗಂಟೆಯೊಳಗೆ ಮುಗಿಯಲಿದ್ದು, ಅದರ ನಂತರದ ಅನುಗ್ರಹವಾಗಿ ಮಧ್ಯಾಹ್ನ 3 ಗಂಟೆಗೆ 300 ಟಿಕೆಟ್ ಕ್ಯೂನಲ್ಲಿ ಶ್ರೀನಿವಾಸನ ದರುಶನದ ಅವಕಾಶ ಲಭ್ಯವಾಗುತ್ತದೆ. ಇದು ಸಾಮಾನ್ಯ ಟಿಕೆಟ್‌ಗಾಗಿ ಕಾದು ಕುಳಿತ ಭಕ್ತರಿಗೆ ಅತ್ಯಂತ ಅನುಕೂಲಕರ ಆಯ್ಕೆಯಾಗಿದೆ.
ಇತ್ತ, ಟಿಟಿಡಿ ಇನ್ನೊಂದು ಮಹತ್ವದ ಮಾಹಿತಿ ನೀಡಿದ್ದು, ತಿರುಮಲದ ಶ್ರೀವಾರಿ ಪುಷ್ಕರಿಣಿ ಜುಲೈ 20 ರಿಂದ ಆಗಸ್ಟ್ 19ರವರೆಗೆ ತಾತ್ಕಾಲಿಕವಾಗಿ ಬಂದ್ ಆಗಲಿದೆ. ಪ್ರತಿ ವರ್ಷ ಬ್ರಹ್ಮೋತ್ಸವದ ಮುಂಚೆ ಪುಷ್ಕರಿಣಿಯ ಶುದ್ಧಿಗೆ ಈ ನಿಗಮಿತ ವಿರಾಮ ನೀಡಲಾಗುತ್ತದೆ. ಈ ಬಾರಿ ಬ್ರಹ್ಮೋತ್ಸವ ಸೆಪ್ಟೆಂಬರ್ 24 ರಿಂದ ಆರಂಭವಾಗಲಿರುವುದರಿಂದ ಪುಷ್ಕರಿಣಿಯಲ್ಲಿ ಈಗಾಗಲೇ ಶುದ್ಧಿಕರಣ ಕಾರ್ಯ ಪ್ರಾರಂಭವಾಗಿದೆ. ಈ ಅವಧಿಯಲ್ಲಿ ಪುಷ್ಕರಿಣಿಗೆ ಭಕ್ತರಿಗೆ ಪ್ರವೇಶವಿಲ್ಲ ಮತ್ತು ಆರತಿ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.
ಟಿಟಿಡಿ ಭಕ್ತರಿಗೆ ಮನವಿ ಮಾಡಿದ್ದು, ಪುಷ್ಕರಿಣಿಯ ಸೇವೆಗಳಿಗಾಗಿ ನಿರೀಕ್ಷೆ ಮಾಡದೇ, ದಿವ್ಯಾನುಗ್ರಹ ಹೋಮದ ಮೂಲಕ ಶ್ರೀನಿವಾಸನ ದರ್ಶನ ಪಡೆದು ಧಾರ್ಮಿಕ ಅನುಭವ ಹೊಂದಬೇಕೆಂದು ತಿಳಿಸಿದೆ.