ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಪ್ರಾರಂಭವಾದ ಆನ್ಲೈನ್ ಪರಿಚಯ ಒಂದು ಕುಟುಂಬದ ಜೀವನವನ್ನೇ ತಲೆಕೆಳಮಾಡಿದ ಘಟನೆ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಮಿಳುನಾಡಿನ ತಿರಪ್ಪತ್ತೂರು ಮೂಲದ ಕಾರ್ತಿಕ್, ಇನ್ಸ್ಟಾಗ್ರಾಂ ಮೂಲಕ ಬೆಂಗಳೂರಿನ ಮಹಿಳೆಯೊಂದಿಗಿನ ಸಂಪರ್ಕ ಬೆಳೆಸಿ, ಬಳಿಕ ತಾನು ಪ್ರೀತಿಸುತ್ತಿದ್ದೇನೆ ಎಂದು ಮೆಸೇಜ್ಗಳ ಮೂಲಕ ಅವಳನ್ನು ಪ್ರೀತಿಸಲು ಒತ್ತಾಯಿಸುತ್ತಿದ್ದ. ಈ ಕಿರುಕುಳದಿಂದ ಬೇಸತ್ತ ಮಹಿಳೆ ವಿಷಯವನ್ನು ತನ್ನ ಗಂಡ ಹಾಗೂ ತಂದೆಗೆ ತಿಳಿಸಿದ್ದಳು. ಬಳಿಕ, ಮಾತುಕತೆಗಾಗಿ ಯುವಕನನ್ನು ಬೆಂಗಳೂರಿಗೆ ಕರೆಸಿಕೊಳ್ಳಲಾಯಿತು.
ಹೆಚ್ಎಎಲ್ ಪ್ರದೇಶದಲ್ಲಿ ನಡೆದ ಈ ಘಟನೆಯ ಸಂದರ್ಭದಲ್ಲಿ, ಯುವತಿಯ ತಂದೆ ಯುವಕನಿಗೆ ಸಮಾಧಾನ ಹೇಳಲು ಪ್ರಯತ್ನಿಸುತ್ತಿದ್ದರೆ, ಕಾರ್ತಿಕ್ ಯುವತಿಯೊಂದಿಗೇ ನೇರವಾಗಿ ಮಾತನಾಡಲು ಬಲವಂತಮಾಡಿದ್ದ. ಈ ಹಿನ್ನೆಲೆಯಲ್ಲಿ, “ನೀನು ಬಾ, ಅವಳನ್ನು ತೋರಿಸುತ್ತೇವೆ” ಎಂದು ಬೈಕ್ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ, ಏನೋ ಗೊಂದಲ ಉಂಟಾಗಿ ಯುವತಿಯ ಸಂಬಂಧಿಯಾದ ಪ್ರಶಾಂತ್ಗೆ ಕಾರ್ತಿಕ್ ಚಾಕು ಇರಿದಿದ್ದಾನೆ.
ಗಂಭೀರವಾಗಿ ಗಾಯಗೊಂಡಿರುವ ಪ್ರಶಾಂತ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಳೀಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.