ಅಹಮದಾಬಾದ್‌ನಲ್ಲಿ ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗುಜರಾತ್‌ನ ಅಹಮದಾಬಾದ್ ಜಿಲ್ಲೆಯ ಬಾವ್ಲಾ ತಾಲ್ಲೂಕಿನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಒಂದೇ ಕುಟುಂಬದ ಐವರು ಸದಸ್ಯರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತರನ್ನು ಬಾಗೋದರಾ ಬಸ್ ನಿಲ್ದಾಣದ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ವಿಪುಲ್ ಕಾಂಜಿ ವಾಘೇಲಾ (34), ಅವರ ಪತ್ನಿ ಸೋನಾಲ್ (26), ಮತ್ತು ಮಗುಗಳು ಕರೀನಾ ಅಲಿ ಸಿಮ್ರಾನ್ (11), ಮಯೂರ (5) ಹಾಗೂ ರಾಜ್‌ಕುಮಾರ್ (8) ಆಗಿದ್ದಾರೆ. ವಿಪುಲ್ ವಾಘೇಲಾ ವೃತ್ತಿಯಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದರು. ಕುಟುಂಬವು ಮೂಲತಃ ಧೋಲ್ಕಾದ ಬಾರ್ಕೋಥಾದ ದೇವಿಪೂಜಕ್ ವಾಸ್ ಎಂಬ ಗ್ರಾಮದವರೆಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಶನಿವಾರ ತಡರಾತ್ರಿಯ ವೇಳೆಗೆ ಈ ಐವರೂ ಸದಸ್ಯರು ಸೇರಿ ವಿಷ ಸೇವಿಸಿದ್ದಾರೆ. ಬೆಳಿಗ್ಗೆ ಬಾಗಿಲು ತೆಗೆಯದ ಕಾರಣದಿಂದ ನೆರೆಹೊರೆಯವರು ಅನುಮಾನ ವ್ಯಕ್ತಪಡಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ಒಡೆದು ನೋಡಿದಾಗ ಮನೆಯೊಳಗೆ ಐವರು ಸಾವನ್ನಪ್ಪಿರುವುದು ದೃಢಪಟ್ಟಿದೆ.

ಘಟನೆಯ ಬಳಿಕ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಿದ್ದಾರೆ. ಕುಟುಂಬವು ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತಾದ್ದರಿಂದ ಈ ದುರ್ಘಟನೆ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಆದರೆ, ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!