ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ತಮ್ಮ ಹೇಳಿಕೆಗಳಿಗೆ ಈಗಲೂ ಬದ್ಧ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.
ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರೌಢಶಾಲಾ ವಿದ್ಯಾರ್ಥಿಯೋರ್ವ ಕೇಳಿದ ಪ್ರಶ್ನೆಗೆ ಉತ್ತರಿಸಿದ ತಿರುವನಂತಪುಂ ಸಂಸದ ಶಶಿ ತರೂರ್, ‘ಬಹಳಷ್ಟು ಜನರು ನನ್ನನ್ನು ಟೀಕಿಸಿದ್ದಾರೆ. ಆದರೆ ನಾನು ಮಾತ್ರ ದೇಶದ ಹಿತಕ್ಕೆ ಯಾವುದು ಒಳ್ಳೆಯದೋ ಅದನ್ನೇ ಹೇಳುತ್ತೇನೆ, ಅದನ್ನೇ ಮಾಡುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಮತ್ತು ಸ್ಪರ್ಧೆ ಸಹಜ. ಆದರೆ ರಾಷ್ಟ್ರದ ಪ್ರಶ್ನೆ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳು ಒಂದೇ ಧ್ವನಿಯಲ್ಲಿ ಮಾತನಾಡಬೇಕು ಎಂಬುದು ನಾನು ನಂಬಿರು ಸಿದ್ಧಾಂತ. ಪಹಲ್ಗಾಮ್ ಭಯೋತ್ಪಾದಕ ದಾಳಿ ಅಂತದ್ದೊಂದು ಸಂದರ್ಭವನ್ನು ಸೃಷ್ಟಿಸಿದ್ದರಿಂದಲೇ, ನಾನು ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪರ ಮಾತನಾಡುತ್ತಿದ್ದೇನೆ. ನಾನು ಅಸಲಿಗೆ ಭಾರತದ ಧ್ವನಿಯಾಗಿ ಮಾತನಾಡಿದ್ದೇನೆ ಎಂದು ತರೂರ್ ಸ್ಪಷ್ಟಪಡಿಸಿದ್ದಾರೆ.
ನನ್ನ ಅಭಿಪ್ರಾಯದಲ್ಲಿ ರಾಷ್ಟ್ರವು ನಮ್ಮ ಮೊದಲ ಆದ್ಯತೆಯಾಗಬೇಕು. ರಾಜಕೀಯ ಪಕ್ಷಗಳು ರಾಷ್ಟ್ರವನ್ನು ಉತ್ತಮಗೊಳಿಸುವ ಒಂದು ಸಾಧನ. ಆದ್ದರಿಂದ ನನ್ನ ಅಭಿಪ್ರಾಯದಲ್ಲಿ, ನೀವು ಯಾವುದೇ ಪಕ್ಷಕ್ಕೆ ಸೇರಿದವರಾಗಿದ್ದರೂ, ಆ ಪಕ್ಷದ ಉದ್ದೇಶವು ತನ್ನದೇ ಆದ ರೀತಿಯಲ್ಲಿ ಉತ್ತಮ ಭಾರತವನ್ನು ರಚಿಸುವುದಾಗಿರಬೇಕು ಎಂದು ಕಾಂಗ್ರೆಸ್ ನಾಯಕ ಹೇಳಿದರು.
ನಮ್ಮ ಸಂಸತ್ತಿನಲ್ಲಿ ಇಂದು 46 ರಾಜಕೀಯ ಪಕ್ಷಗಳಿವೆ. ಅವರೆಲ್ಲರೂ ಒಂದೇ ಧ್ವನಿಯಲ್ಲಿ ಮಾತನಾಡಲು ಸಾಧ್ಯವಾಗುವಂತಹ ಒಂದಾದರೂ ಸಮಸ್ಯೆ ಎದುರಾಗಲೇಬೇಕು. ಪಹಲ್ಗಾಮ್ ದಾಳಿ ಅಂತದ್ದೊಂದು ಸಂದರ್ಭ ಎಂದು ನನಗೆ ಅನಿಸಿದ್ದರಿಂದಲೇ ನಾನು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಪರವಾಗಿ ಮಾತನಾಡಿದ್ದೇನೆ. ನನ್ನ ಎಲ್ಲಾ ಹೇಳಿಕೆಗಳಿಗೆ ನಾನೂ ಈಗಲೂ ಮತ್ತು ಮುಂದೆಯೂ ಬದ್ಧನಾಗಿರುತ್ತೇನೆ ಎಂದು ಹೇಳಿದರು.