ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಈ ಹಿನ್ನೆಲೆ ಹವಾಮಾನ ಇಲಾಖೆ (IMD) 9 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡುಗಳಿಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಉಳಿದ ಐದು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ರಾಜ್ಯಾದ್ಯಂತ ಸಾಧಾರಣ ಮಳೆ ಆಗಲಿದ್ದು, ಗಂಟೆಗೆ 40 ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನೀರಾವರಿ ವಿನ್ಯಾಸ ಮತ್ತು ಸಂಶೋಧನಾ ಮಂಡಳಿ, ಪತ್ತನಂತಿಟ್ಟ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿನ ನದಿಗಳಲ್ಲಿ ನೀರಿನ ಮಟ್ಟ ಏರಿದ ಕಾರಣ ‘ಅಪಾಯದ ಎಚ್ಚರಿಕೆ’ಗಳನ್ನು ನೀಡಿದೆ. ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆ ಪಾಲಕ್ಕಾಡಿನ ಅಣೆಕಟ್ಟುಗಳ ಗೇಟ್ಗಳನ್ನು ತೆರೆಯಲಾಗಿದೆ ಎಂದು ಪಾಲಕ್ಕಾಡ್ ಜಿಲ್ಲಾಡಳಿತ ತಿಳಿಸಿದೆ.
ನದಿ ದಂಡೆಯಲ್ಲಿ ವಾಸಿಸುವ ನಿವಾಸಿಗಳು ಜಾಗರೂಕರಾಗಿರಲು ಮತ್ತು ಅಧಿಕಾರಿಗಳ ಸೂಚನೆಯಂತೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸಿದ್ಧರಾಗಲು ಸೂಚಿಸಲಾಗಿದೆ. ಬಲವಾದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಜುಲೈ 23ರವರೆಗೆ ಕೇರಳ-ಕರ್ನಾಟಕ ಕರಾವಳಿಯಲ್ಲಿ ಮೀನುಗಾರಿಕೆ ನಡೆಸದಂತೆ ಐಎಂಡಿ ಎಚ್ಚರಿಕೆ ನೀಡಿದೆ.