ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ತನಿಖೆ -2 ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಬ್ ಇನ್ಸ್ ಪೆಕ್ಟರ್ ಕೀರಪ್ಪ ಘಟ ಕಾಂಬ್ಳೆ (54) ಅವರು ಬಂಟ್ವಾಳದ ಭಾಮಿ ಜಂಕ್ಷನ್ ಬಳಿರುವ ಬಾಡಿಗೆ ಮನೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.
ಮೂಲತ: ಉತ್ತರಕನ್ನಡದ ಕಾರವಾರ ನಿವಾಸಿಯಾಗಿರುವ ಇವರು ಬಾಡಿಗೆ ಮನೆಯ ಫ್ಯಾನ್ ಗೆ ನೇಣು ಬಿಗಿದು ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು,ಸಂಜೆಯ ವೇಳೆಗೆ ಬೆಳಕಿಗೆ ಬಂದಿದೆ.
ಕೀರಪ್ಪ ಅವರು ಕಳೆದ ಐದು ತಿಂಗಳ ಹಿಂದೆ ಶಿರಸಿ ಠಾಣೆಯಿಂದ ಸಬ್ ಇನ್ಸ್ ಪೆಕ್ಟರ್ ಆಗಿ ಭಡ್ತಿಗೊಂಡು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ತನಿಖೆ -2 ವಿಭಾಗಕ್ಕೆ ವರ್ಗಾವಣೆಯಾಗಿ ಬಂದಿದ್ದರು.
ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಕೆಲ ಸಮಯದ ಕಾಲ ಬಂಟ್ವಾಳದ ಸ್ವರ್ಣೋದ್ಯಮಿಯವರಿಗೆ ಸೇರಿದ ವಸತಿ ಸಂಕೀರ್ಣದಲ್ಲಿದ್ದು,ಇತ್ತೀಚೆಗಷ್ಟೇ ಈ ವಸತಿ ಸಂಕೀರ್ಣದ ಮುಂಭಾಗದಲ್ಲಿರುವ ಬಾಡಿಗೆ ಮನೆಗೆ ಶಿಷ್ಟ್ ಆಗಿದ್ದರು.
ಈ ಸಂದರ್ಭ ಅವರ ಕುಟುಂಬಸ್ಥರು ಇದ್ದು,ಎರಡು ದಿನಗಳ ಹಿಂದೆಯಷ್ಠೆ ಅವರು ವಾಪಾಸ್ ಊರಿಗೆ ತೆರಳಿದ್ದರೆನ್ನಲಾಗಿದ್ದು, ಬಳಿಕ ಕೀರಪ್ಪ ಅವರು ಏಕಾಂಗಿಯಾಗಿ ವಾಸ್ತವ್ಯವಿದ್ದರು.
ಭಾನುವಾರ ಬೆಳಿಗ್ಗೆಯಿಂದಲೇ ಕರ್ತವ್ಯಕ್ಕೆ ಹಾಜರಾಗದಿದ್ದು, ಇವರಿಗೆ ಠಾಣೆಯಿಂದ ಸಿಬ್ಬಂದಿಗಳು ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿರಲಿಲ್ಲ, ಇದರಿಂದ ಅನುಮಾನಗೊಂಡ ಠಾಣಾ ಸಿಬ್ಬಂದಿಗಳು ಸಂಜೆ ವೇಳೆ ಅವರ ಬಾಡಿಗೆ ಮನೆಗೆ ಹೋಗಿ ಪರಿಶೀಲಿಸಿದಾಗ ಬೀಗ ಹಾಕಿದ ಸ್ಥಿತಿಯಲ್ಲಿತ್ತೆನ್ನಲಾಗಿದೆ.
ಹೊರಗಡೆಯಿಂದ ಕರೆದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಕಿಟಕಿಯಿಂದ ನೋಡಿದಾಗ ಕೋಣೆಯೊಳಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.
ತಕ್ಷಣ ನಗರ ಠಾಣೆಗೆ ಮಾಹಿತಿ ನೀಡಲಾಗಿದ್ದು, ನಗರ ಠಾಣಾ ಪೊಲೀಸರು ಅಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ,ಇಬ್ಬರು ಪತ್ರಿಯರ ಸಹಿತ ಬಂಧುಬಳಗವನ್ನು ಅಗಲಿದ್ದಾರೆ.
ಇವರ ಕುಟುಂಬ ಹೊಸ ಮನೆಯೊಂದನ್ನು ಖರೀದಿಸುವ ಚಿಂತನೆಯಲ್ಲಿದ್ದರೆನ್ನಲಾಗಿದ್ದು,ಇದಕ್ಕೆ ಬೇಕಾದಷ್ಟ ಹಣ ಹೊಂದಿಸಿಕೊಳ್ಳಲು ಸಾಧ್ಯವಾಗದಿರುವುದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬೇಕೆಂಬ ಶಂಕೆ ಪೊಲೀಸರು ತಮ್ಮ ತನಿಖೆಯಲ್ಲಿ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಐಜಿ ಅಮಿತ್ ಸಿಂಗ್,ಎಸ್ಪಿ ಡಾ.ಅರುಣ್ ಕುಮಾರ್,ಆಡಿಷನಲ್ ಎಸ್.ಪಿ.,ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಅವರು ಭೇಟಿ ನೀಡಿದ್ದಾರೆ.ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಮೃತದೇಹವನ್ನು ಸಾಗಿಸಲಾಗಿದ್ದು, ಇಲ್ಲೇ ಮರಣೋತ್ತರ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.ಸುದ್ದಿ ತಿಳಿದು ಅವರ ಪತ್ನಿ ಹಾಗೂ ಕುಟುಂಬಸ್ಥರು ಬಂಟ್ವಾಳಕ್ಕೆ ಅಗಮಿಸಿದ್ದಾರೆ.