ಮಳೆಗಾಲ ಬಂದುಹೋದರೆ ಬಿಸಿ ಬಿಸಿ ತಿಂಡಿಗಳ ಹಂಬಲ ಹೆಚ್ಚಾಗುತ್ತದೆ. ವಿಶೇಷವಾಗಿ ಈರುಳ್ಳಿ ಪಕೋಡ, ಬಜ್ಜಿ, ಬೋಂಡಾ ಮುಂತಾದ ಡೀಪ್ ಫ್ರೈ ತಿಂಡಿಗಳು ತಿನ್ನೋ ಆಸೆಯಾಗೋದು ಸಹಜ. ಆದರೆ, ಎಣ್ಣೆಯಲ್ಲಿ ಹುರಿದ ಆಹಾರ ಆರೋಗ್ಯಕರವೇ? ಯಾವ ಎಣ್ಣೆ ಬಳಸಬೇಕು? ಯಾವ ಎಣ್ಣೆ ತಪ್ಪಿಸಬೇಕು? ಎಂಬ ಪ್ರಶ್ನೆಗಳು ಸಾಮಾನ್ಯ.
ಪೌಷ್ಟಿಕತಜ್ಞರು ಹಾಗೂ ವೈದ್ಯರ ಪ್ರಕಾರ, ಸರಿಯಾದ ವಿಧಾನ, ಸರಿಯಾದ ಎಣ್ಣೆ ಮತ್ತು ಸರಿಯಾದ ಪ್ರಮಾಣದಲ್ಲಿ ಡೀಪ್ ಫ್ರೈ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವಲ್ಲ. ಮಳೆಗಾಲದಲ್ಲಿ ಶುದ್ಧ ಎಣ್ಣೆಯನ್ನು ಸರಿಯಾದ ತಾಪಮಾನದಲ್ಲಿ ಬಳಸಿ ಹುರಿದರೆ, ತಿಂಡಿಗಳು ಸುರಕ್ಷಿತವಾಗಿರುತ್ತವೆ.
ಸಂಸ್ಕರಿಸಿದ ತೆಂಗಿನ ಎಣ್ಣೆ: ಹೆಚ್ಚಿನ ಸ್ಮೋಕ್ ಪಾಯಿಂಟ್ (ಸುಮಾರು 400°F) ಹೊಂದಿದ್ದು, ಮಧ್ಯಮ ಸರಪಳಿ ಕೊಬ್ಬಿನಾಮ್ಲಗಳಿಂದ ಸಮೃದ್ಧ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಹಾಗೂ ಶರೀರದ ಉರಿಯೂತ ಕಡಿಮೆ ಮಾಡುತ್ತದೆ.
ಸಂಸ್ಕರಿಸಿದ ಆಲಿವ್ ಎಣ್ಣೆ: ಮೊನೋಸ್ಯಾಚುರೇಟೆಡ್ ಕೊಬ್ಬುಗಳಿಂದ ಸಮೃದ್ಧ, ಸ್ಮೋಕ್ ಪಾಯಿಂಟ್ ಸುಮಾರು 465°F. ಉರಿಯೂತ ನಿಯಂತ್ರಣಕ್ಕೆ ಸಹಾಯಕವಾದ ಓಲಿಯೊಕಾಂಥಾಲ್ ಎಂಬ ನೈಸರ್ಗಿಕ ಸಂಯುಕ್ತವನ್ನು ಹೊಂದಿದೆ.
ತುಪ್ಪ: ಸ್ಮೋಕ್ ಪಾಯಿಂಟ್ ಸುಮಾರು 450°F. ಜೀರ್ಣಕ್ರಿಯೆ ಸುಧಾರಿಸುತ್ತದೆ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಆವಕಾಡೊ ಎಣ್ಣೆ: ಸುಮಾರು 520°F ಹೊಗೆ ಬಿಂದು, ಡೀಪ್ ಫ್ರೈಗೆ ಈ ಎಣ್ಣೆ ಅತ್ಯುತ್ತಮ.
ತಪ್ಪಿಸಬೇಕಾದ ಎಣ್ಣೆಗಳು
ಸೂರ್ಯಕಾಂತಿ, ಸೋಯಾಬೀನ್ ಮತ್ತು ಕ್ಯಾನೋಲಾ ಎಣ್ಣೆಯಂತಹ ಬೀಜದ ಎಣ್ಣೆಗಳು ಹೆಚ್ಚಿನ ತಾಪದಲ್ಲಿ ಆಕ್ಸಿಡೀಕರಣಗೊಳ್ಳುವ ಸಾಧ್ಯತೆ ಇರುವುದರಿಂದ ಇವುಗಳನ್ನು ತಪ್ಪಿಸುವುದು ಉತ್ತಮ. ಇವು ಶರೀರಕ್ಕೆ ಹಾನಿಕಾರಕ ಸಂಯುಕ್ತಗಳನ್ನು ಸೃಷ್ಟಿಸಬಹುದು.
ಡೀಪ್ ಫ್ರೈ ಮಾಡುವಾಗ ತಪ್ಪಿಸಬೇಕಾದ ತಪ್ಪುಗಳು
ಎಣ್ಣೆಯ ಪ್ಯಾನ್ ಅನ್ನು ಅತಿಯಾಗಿ ತುಂಬಿಸುವುದು
ತುಂಬಾ ಬೇಗ ಮಸಾಲೆ ಹಾಕುವುದು
ಆಹಾರವನ್ನು ಹೆಚ್ಚು ಹೊತ್ತು ಎಣ್ಣೆಯಲ್ಲಿ ಇಡುವುದು
ಹಳೆಯ ಎಣ್ಣೆಯನ್ನು ಮರುಬಳಕೆ ಮಾಡುವುದು
ಹುರಿದ ಆಹಾರವನ್ನು ಸರಿಯಾಗಿ ಬಸಿಯದೇ ಸೇವಿಸುವುದು
ಮಳೆಗಾಲದ ಬಿಸಿ ಬಿಸಿ ತಿಂಡಿಗಳನ್ನು ತ್ಯಜಿಸುವ ಅಗತ್ಯವಿಲ್ಲ. ಆದರೆ, ಸೂಕ್ತ ಎಣ್ಣೆ, ಸರಿಯಾದ ತಾಪಮಾನ ಮತ್ತು ಸ್ವಚ್ಛ ವಿಧಾನ ಪಾಲಿಸಿದರೆ, ಡೀಪ್ ಫ್ರೈ ತಿಂಡಿಗಳನ್ನು ಆರೋಗ್ಯಕರವಾಗಿ ಆನಂದಿಸಬಹುದು. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)