ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಮತ್ತು ಕೈಗಾರಿಕಾ ನಗರಿ ತುಮಕೂರು ನಡುವಿನ ಸಂಚಾರ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಲ್ಲ ಮಹತ್ವಾಕಾಂಕ್ಷಿ ಮಾದಾವರ (BIEC) – ತುಮಕೂರು ಮೆಟ್ರೋ ರೈಲು ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು (DPR) ಬಿಎಂಆರ್‌ಸಿಎಲ್ (BMRCL) ಅಧಿಕೃತವಾಗಿ ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಸಲ್ಲಿಸಿದೆ.
ಸುಮಾರು 60 ಕಿಲೋಮೀಟರ್ ಉದ್ದದ ಈ ಬೃಹತ್ ಕಾರಿಡಾರ್ ಅನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಹಾಗೂ ‘ಬಿಲ್ಡ್-ಆಪರೇಟ್-ಟ್ರಾನ್ಸ್‌ಫರ್’ (BOT) ಮಾದರಿಯಲ್ಲಿ ಜಾರಿಗೊಳಿಸಲು ಪ್ರಸ್ತಾಪಿಸಲಾಗಿದ್ದು, ಇದು ಕರ್ನಾಟಕದ ಮೊದಲ ಅಂತರ-ಜಿಲ್ಲಾ ಮೆಟ್ರೋ ಮಾರ್ಗವಾಗಲಿದೆ. ಸದ್ಯದಲ್ಲೇ ಈ ವರದಿಯನ್ನು ರಾಜ್ಯ ಸಚಿವ ಸಂಪುಟದ (Cabinet) ಒಪ್ಪಿಗೆಗೆ ಮಂಡಿಸಲು ಸರ್ಕಾರ ಸಜ್ಜಾಗಿದೆ.
ಇದನ್ನೂ ಓದಿ:
ಈ ಯೋಜನೆಯ ಒಟ್ಟು ವೆಚ್ಚವು ಆರ್ಥಿಕ ಮಾದರಿಗಳಿಗೆ ಅನುಗುಣವಾಗಿ 17,785 ಕೋಟಿ ರೂ. ನಿಂದ 19,361 ಕೋಟಿ ರೂ. ಇರಲಿದೆ ಎಂದು ಅಂದಾಜಿಸಲಾಗಿದೆ. ಎಲ್ಲಾ ಅನುಮೋದನೆಗಳು ಮತ್ತು ಹಣಕಾಸು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಈ ಮೆಟ್ರೋ ಮಾರ್ಗ ನಿರ್ಮಾಣಗೊಳ್ಳಲು ಕನಿಷ್ಠ 4 ರಿಂದ 5 ವರ್ಷಗಳ ಕಾಲಾವಕಾಶ ಬೇಕಾಗುತ್ತದೆ.



