ಹೊಸದಿಗಂತ ಡಿಜಿಟಲ್ ಡೆಸ್ಕ್:
ನರಭಕ್ಷಕ ಚಿರತೆಯೊಂದು ಮನೆಯ ಹೊರಗೆ ಆಟವಾಡುತ್ತಿದ್ದ 3 ವರ್ಷದ ಮಗುವನ್ನು ಎಳೆದೊಯ್ದಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಮಕ್ಕಳೆಲ್ಲರೂ ಮಗುವಿನ ಜತೆ ಆಟವಾಡುತ್ತಿದ್ದರು, ಆಗ ದಾಳಿ ಮಾಡಿದ ಚಿರತೆ ಮಗುವನ್ನು ಬಾಯಲ್ಲಿ ಕಚ್ಚಿಕೊಂಡು ಓಡಿದೆ. ಬಳಿಕ ಕೊಂದಿದೆ, ವಿರೂಪಗೊಂಡಿರುವ ಮಗುವಿನ ದೇಹ ಮನೆಯ ಹತ್ತಿರದ ಪೊದೆಯೊಂದರಲ್ಲಿ ಪತ್ತೆಯಾಗಿದೆ.
ಅಂಕಿತ್ ಕುಮಾರ್ ಅವರ ಮಗ ರಾಜ್ ಕುಮಾರ್ ತನ್ನ ತಾಯಿಯ ಚಿಕ್ಕಪ್ಪನ ಮಕ್ಕಳೊಂದಿಗೆ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಸಂಜೆ 5 ಗಂಟೆ ಸುಮಾರಿಗೆ ಪುರ್ವಾಲ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆಹ್ರಿ ಅರಣ್ಯ ವಿಭಾಗದ ಭಿಲಾಂಗನಾ ರೇಂಜ್ ಆಫೀಸರ್ ಆಶಿಶ್ ನೌಟಿಯಾಲ್ ಮತ್ತು ಪುರ್ವಾಲ್ ಗ್ರಾಮದ ಮುಖ್ಯಸ್ಥ ಸಂಜಯ್ ತಿವಾರಿ ಮಾತನಾಡಿ, ಮಗು ಆಟವಾಡುತ್ತಿದ್ದಾಗ ಮನೆಯ ಹಿಂದೆ ಚಿರತೆ ಹೊಂಚುಹಾಕಿ ಕುಳಿತಿತ್ತು. ಮನೆಯಲ್ಲಿ ಮಗನನ್ನು ಕಾಣದ ಮಂಜು ದೇವಿ ಹುಡುಕಾಟ ಆರಂಭಿಸಿದರು. ಬಳಿಕ ಆಕೆಯ ನೆರೆಹೊರೆಯವರು ಕೂಡ ಹುಡುಕಿದರೂ ಎಲ್ಲೂ ಮಗು ಪತ್ತೆಯಾಗಿರಲಿಲ್ಲ.
ಅಷ್ಟರಲ್ಲಿ ಯಾರೋ ಮನೆಯ ಹಿಂದಿನ ರಸ್ತೆಯಲ್ಲಿ ರಕ್ತದ ಕಲೆಗಳನ್ನು ಗಮನಿಸಿದರು. ಅದನ್ನು ಹಿಂಬಾಲಿಸಿ ಹೋದಾಗ ಅಲ್ಲಿ ವಿರೂಪಗೊಂಡಿರುವ ಮಗುವಿನ ದೇಹ ಪತ್ತೆಯಾಗಿತ್ತು. ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಈ ಭಾಗದ ಜನ ಚಿರತೆಯ ಭಯದಿಂದ ಮನೆಯಲ್ಲಿಯೇ ಕುಳಿತಿದ್ದಾರೆ.