ಉಡುಗೊರೆ-ಆಮಿಷಗಳಿಗೇ ಅಂತಲೇ ಬರೋಬ್ಬರಿ 1,000 ಕೋಟಿ ರು ವ್ಯಯಿಸಿದೆ ಬೆಂಗಳೂರಿನ ಫಾರ್ಮಾ ಕಂಪನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆದಾಯ ತೆರಿಗೆ ಇಲಾಖೆಯು ಅಕ್ರಮ ವ್ಯವಹಾರದ ಆರೋಪದ ಮೇಲೆ ಬೆಂಗಳೂರು ಮೂಲದ ಔಷಧ ತಯಾರಿಕಾ ಕಂಪೆನಿಯೊಂದರ ಮೇಲೆ ದಾಳಿನಡೆಸಿದ್ದು ಈ ವೇಳೆ ಕಂಪೆನಿಯು ತನ್ನ ಉತ್ಪನ್ನಗಳ ಪ್ರಚಾರಕ್ಕಾಗಿ ಸಾವಿರಾರು ಕೋಟಿ ರೂ. ವ್ಯಯಿಸಿರುವುದು ಪತ್ತೆಯಾಗಿದೆ. ಸುಮಾರು 50 ದೇಶಗಳಲ್ಲಿ ಕಂಪೆನಿಯು ಅಸ್ತಿತ್ವ ಹೊಂದಿದ್ದು ಭಾರತದಲ್ಲಿ ಕಂಪನಿಗೆ ಸಂಬಂಧಪಟ್ಟ 9 ರಾಜ್ಯಗಳಲ್ಲಿರುವ 36 ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ.

ಶೋಧ ಕಾರ್ಯಾಚರಣೆಯ ವೇಳೆ ದೋಷಾರೋಪಣೆಗೆ ಸಂಬಂಧಿಸಿದ ಕೆಲ ದಾಖಲೆಗಳು ಹಾಗೂ ಡಿಜಿಟಲ್‌ ಡೇಟಾ ರೂಪದಲ್ಲಿರುವ ಪುರಾವೆಗಳು ದೊರಕಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಂಪನಿಯ ಖಾತಾಪುಸ್ತಕದಲ್ಲಿ ಅನುಮಾನಾಸ್ಪದ ವ್ಯವಹಾರಗಳು ಕಂಡುಬಂದಿದ್ದು ʼಮಾರಾಟ ಮತ್ತು  ಪ್ರಚಾರ’ದ ಹೆಸರಿನಲ್ಲಿ ಉಚಿತ ಕೊಡುಗೆಗಳನ್ನು ನೀಡಿರುವುದು ಪತ್ತೆಯಾಗಿದೆ. ಕಂಪನಿಯು ಪ್ರಚಾರ, ಸೆಮಿನಾರ್‌ಗಳು ಮತ್ತು ವಿಚಾರ ಸಂಕಿರಣಗಳು, ವೈದ್ಯಕೀಯ ಸಲಹೆಗಳು ಮುಂತಾದ ಹೆಸರಿನಲ್ಲಿ ಅನೈತಿಕ ಮಾರ್ಗದ ಮೂಲಕ ವೈದ್ಯಕೀಯ ವೃತ್ತಿಪರರಿಗೆ ಪ್ರಯಾಣದ ವೆಚ್ಚಗಳು, ಉಡುಗೊರೆಗಳು, ಕೆಲ ವಿಶೇಷ ಕೊಡುಗೆಗಳನ್ನು ನೀಡಿದೆ ಎನ್ನಲಾಗಿದೆ. ಈ ಉಡುಗೊರೆ, ಕೊಡುಗೆಗಳಿಗೆಂದೇ ಸುಮಾರು 1,000 ಕೋಟಿ ರೂ.ಗಳನ್ನು ಕಂಪನಿ ವ್ಯಯಿಸಿದೆ.

ಅಲ್ಲದೇ ಕೆಲವು ಆದಾಯಗಳಿಗೆ ಸಂಬಂಧಿಸಿದ ನಿಭಂದನೆಗಳನ್ನು ದುರುಪಯೋಗ ಪಡಿಸಿಕೊಂಡು ತೆರಿಗೆ ಕಡಿತಕ್ಕೆ ಅರ್ಹವಾದ ಘಟಕಗಳಿಗೆ ಹೆಚ್ಚಿನ ವಿನಿಯೋಗ ಮಾಡಿ ಹೆಚ್ಚಿನ ಪ್ರಮಾಣದ ವಿನಾಯಿತಿ ಪಡೆದುಕೊಂಡಿದ್ದು, ತೆರಿಗೆ ಕಡಿತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕ್ಲೇಮ್‌ ಮಾಡಿ ವಂಚಿಸಿರುವುದು ಆದಾಯ ತೆರಿಗೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಈ ವಂಚನೆಯ ಒಟ್ಟೂ ಮೊತ್ತ ಸುಮಾರು 300 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಇದಲ್ಲದೇ ಹೊರಗಿನ ಕೆಲ ಔಷಧ ತಯಾರಕರ ಹೆಸರಿನಲ್ಲಿ ಮಾಡಿಕೊಂಡ ಒಪ್ಪಂದಗಳ ಅಡಿಯಲ್ಲಿನ ವಹಿವಾಟುಗಳಲ್ಲಿ ಆದಾಯ ತೆರಿಗೆ ಕಾಯಿದೆ, 1961 ರ ವಿಭಾಗ 194C ಪ್ರಕಾರ ಮೂಲದಲ್ಲಿ ತೆರಿಗೆ ಕಡಿತದ (ಟ್ಯಾಕ್ಸ್‌ ಡಿಡಕ್ಷನ್‌ ಎಟ್‌ ಸೋರ್ಸ್)‌ ನಿಬಂಧನೆಗಳನ್ನೂ ಕೂಡ ಉಲ್ಲಂಘಿಸಿರುವುದು ಪತ್ತೆಯಾಗಿದೆ.

ಜೊತೆಗೆ ಲೆಕ್ಕಕ್ಕೆ ಸಿಗದ 1.20 ಕೋಟಿ ರೂ. ನಗದು ಹಾಗೂ 1.40 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳು ಪತ್ತೆಯಾಗಿದ್ದು ಅವುಗಳನ್ನು ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪಿಐಬಿ ವರದಿ ಮಾಡಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!