ಅವಳು ವಿದೇಶಿ ತಳಿ, ನಾನು ನಾಟಿ ಮನುಷ್ಯ. ಆಕೆಯದ್ದು ಹಾಲಿನ ಬಿಳುಪು, ನನ್ನದು ಒಲೆ ಕಪ್ಪು ಆದರೆ ನಮ್ಮ ಪ್ರೀತಿಗೆ ಬಣ್ಣಗಳ ಅಂತರವಿಲ್ಲ..
ಇದು ಸ್ವೀಟ್ 16 ಪ್ರೇಮಿಗಳ ಮಾತಲ್ಲ, 82 ವಯಸ್ಸಿನ ವೃದ್ಧನ ಪ್ರೇಮದ ವ್ಯಾಖ್ಯಾನ..
1970ರಲ್ಲಿ ರಾಜಸ್ಥಾನದಲ್ಲಿ ಒಂಟೆ ಮಾವುತನಾಗಿದ್ದ ವ್ಯಕ್ತಿಗೆ ವಿದೇಶದಿಂದ ರಾಜಸ್ತಾನ ನೋಡಲು ಬಂದ ‘ಗೋರಿ’ ಮೇಲೆ ಪ್ರೀತಿಯಾಗುತ್ತದೆ.
ಥಾರ್ ಮರುಭೂಮಿಯಲ್ಲಿ ಒಂಟೆ ಮಾವುತನಾಗಿ ನಮ್ಮ ಸ್ಟೋರಿಯ ಹೀರೋ ಕೆಲಸ ಮಾಡುತ್ತಿರುತ್ತಾರೆ. ಆಸ್ಟ್ರೇಲಿಯಾದಿಂದ ಭಾರತ ನೋಡಲು ಬಂದ ಮರೀನಾ ನಮ್ಮ ಹೀರೋನನ್ನು ಇದೇ ಬಿಸಿಲಿನ ಮರುಭೂಮಿಯಲ್ಲಿ ನೋಡುತ್ತಾಳೆ..ಮುಂದೇನಾಯ್ತು ನೋಡಿ..
‘ ಐದು ದಿನದ ಪ್ರವಾಸಕ್ಕೆಂದು ಮರೀನಾ ಭಾರತಕ್ಕೆ ಬಂದಿದ್ದಳು. ನಾನು ಅವಳನ್ನು ಅದೇ ಮೊದಲ ಬಾರಿಗೆ ನೋಡಿದ್ದು, ಎಂಥಾ ಸುಂದರಿ ಆಕೆ.. ಮೊದಲ ನೋಟದಲ್ಲೇ ಪ್ರೀತಿ ಹುಟ್ಟಿತ್ತು. ಮೆಲ್ಲಗೆ ಆಕೆಗೆ ಒಂಟೆ ಸವಾರಿ ಮಾಡಲು ಹೇಳಿಕೊಟ್ಟೆ. ಮೂವತ್ತು ವರ್ಷದ ನನಗೆ ‘ಹೀಗೆ ಬಂದು ಹಾಗೆ ಹೋಗುವ ಹುಡುಗಿ’ ಮೇಲೆ ಮನಸ್ಸಾಗಿತ್ತು. ಅವಳಿಗೂ ನನ್ನ ಮೇಲೆ ಪ್ರೀತಿ ಹುಟ್ಟಿತ್ತು. ಪ್ರವಾಸದುದ್ದಕ್ಕೂ ಅದೇನೋ ಕಣ್ಣಲ್ಲೊಂದು ಮಿಂಚು ಇಬ್ಬರಲ್ಲೂ ಇತ್ತು. ನೋಡುವ ಬಯಕೆ ಇದ್ದರೂ ಕಣ್ಣೋಟ ಬೆರೆತಾಗ ನಾಚಿಕೆಯಾಗುತ್ತಿತ್ತು.
ಆಸ್ಟ್ರೇಲಿಯಾಗೆ ಹೋಗುವ ದಿನದಂದು ಐ ಲವ್ ಯೂ ಎಂದಳು. ಇದು ನಿಜಕ್ಕೂ ನಂಬುವಂಥ ಮಾತಾ? ಖುಷಿಗೆ ಪಾರವೇ ಇರಲಿಲ್ಲ. ಈ ಮೊದಲು ಯಾರೂ ನನಗೆ ಐ ಲವ್ ಯು ಎಂದೇ ಇಲ್ಲ. ಆಕೆಗೆ ಲವ್ ಯೂ ಟೂ ಎನ್ನೋದಕ್ಕೂ ನನಗೆ ನಾಚಿಕೆ. ಆಕೆಗಿಂತ ಹೆಚ್ಚು ನಾನೇ ಕೆಂಪಾಗಿದ್ದೆ. ಮೌನಂ ಸಮ್ಮತಿ ಲಕ್ಷಣಂ ಅನ್ನೋದು ಆಕೆಗೆ ಗೊತ್ತಿತ್ತು ಅನಿಸುತ್ತದೆ. ಆಕೆ ಆಸ್ಟ್ರೇಲಿಯಾಗೆ ಹೋದ ನಂತರ ನನ್ನ ಜಗತ್ತೇ ಖಾಲಿಯಾಗಿತ್ತು.ಪಕ್ಕದ ಬೀದಿಯಲ್ಲಾದರೂ ಅವಳ ಮನೆ ಇರಬಾರದಿತ್ತಾ ಎನಿಸಿತ್ತು. ಆದರೇನು ಮಾಡೋದು?
ಈ ಆಲೋಚನೆ ಮಾಡುವ ಸಮಯದಲ್ಲೇ ಮರೀನಾ ನನಗೆ ಪತ್ರ ಬರೆದಳು. ಆಸ್ಟ್ರೇಲಿಯಾಗೆ ಬಾ ಎಂದಳು. ಆಕೆಗೋಸ್ಕರ ಚಂದ್ರಲೋಕಕ್ಕೂ ಹೊರಡೋಕೆ ತಯಾರಿದ್ದ ನನಗೆ ಈಗ ಆಸ್ಟ್ರೇಲಿಯಾ ದೂರ ಎನಿಸಲಿಲ್ಲ. ಕುಟುಂಬದವರಿಗೆ ಒಂದು ಮಾತೂ ಹೇಳದೇ ಸಾಲ ಮಾಡಿ ಟಿಕೆಟ್ ಖರೀದಿಸಿದೆ.
ಕ್ಷಣ ಯೋಚಿಸದೆ ಕಣ್ಮುಚ್ಚಿ ಕಣ್ತೆಗೆದಾಗ ಆಸ್ಟ್ರೇಲಿಯಾದಲ್ಲಿದೆ. ಆಕೆಯನ್ನು ನೋಡಿದಾಗ ಮತ್ತೆಲ್ಲವೂ ಹೊಸತಂತೆ ಭಾಸವಾಯಿತು. ಮತ್ತೊಮ್ಮೆ ಆಕೆಯ ಮೇಲೆ ಪ್ರೀತಿಯಾಯ್ತು. ಮೂರು ತಿಂಗಳು ಅವಳೊಂದಿಗೆ ಜೀವನ ನಡೆಸಿದೆ. ನನ್ನ ಇಡೀ ಜೀವನದ ಸುಂದರ ಕ್ಷಣವದು. ಜೀವನವಿಡೀ ನೆನೆಸಿಕೊಳ್ಳುವ ಮಾಯಾಲೋಕ ಅಲ್ಲಿತ್ತು. ನಾನು ಅಲ್ಪ ಸ್ವಲ್ಪ ಇಂಗ್ಲಿಷ್ ಕಲಿತೆ, ಅವಳೂ ನಾಲ್ಕು ಸ್ಟೆಪ್ ರಾಜಸ್ಥಾನಿ ನೃತ್ಯ ಕಲಿತಳು. ನಮ್ಮಲ್ಲಿದ್ದ ಎಲ್ಲವನ್ನೂ ಹಂಚಿಕೊಳ್ಳುವ ಮಧ್ಯೆಯೇ ನಾವು ಮದುವೆಯಾಗಿ ಇಲ್ಲಿಯೇ ಇದ್ದುಬಿಡೋಣ ಎಂದಳು.
ಹೆತ್ತಬ್ಬೆಯನ್ನು ಬಿಟ್ಟು ಪರದೇಶದಲ್ಲಿ ನೂರು ಕಾಲ ಬದುಕೋಕೆ ಹೇಗೆ ಸಾಧ್ಯ? ಆಗೋದಿಲ್ಲ ನೀನು ಬಾ ನಮ್ಮೂರಿಗೆ ಎಂದೆ. ಹೀಗಿದ್ದರೆ ನಮ್ಮ ಜೀವನದಲ್ಲಿ ನಾವು ಮುಂದುವರಿಯಲೇಬೇಕು. ದೂರಾಗುವುದು ಬಿಟ್ಟರೆ ದಾರಿ ಇಲ್ಲ ಎಂದೆ. ಎಂಥಾ ಕಠೋರ ಹೃದಯ ನನ್ನದು. ಆಕೆಯನ್ನು ದೂರ ಮಾಡಿ ನನ್ನೂರಿಗೆ ಮರಳಿದೆ.
ಜೀವನ ತಲೆಕೆಳಗಾಗಿತ್ತು. ಅವಳಿಗೆ ಪತ್ರ ಬರೆಯುವ ಧೈರ್ಯ ಇರಲಿಲ್ಲ. ಇದರ ಮಧ್ಯೆ ಮದುವೆಯಾದೆ. ಕುಟುಂಬ ನಿರ್ವಹಣೆಗಾಗಿ ದ್ವಾರಪಾಲಕನಾಗಿ ಕೆಲಸಕ್ಕೆ ಸೇರಿದೆ. ಆಗಾಗ ಮರೀನಾ ನನ್ನ ತಲೆ, ಹೃದಯದಲ್ಲಿ ನಿಂತುಬಿಡುತ್ತಿದ್ದಳು. ದಿನಕಳೆದಂತೆ ಪ್ರೀತಿ ಹೃದಯದ ಒಳ ಕೋಣೆಯೊಳಗೆ ಕೂತುಬಿಟ್ಟಿತು. ಎರಡು ವರ್ಷದ ಹಿಂದಷ್ಟೆ ಮುದ್ದಿನ ಮಡದಿಯನ್ನು ಕಳೆದುಕೊಂಡೆ. ಮಕ್ಕಳು ನನ್ನನ್ನು ಕಳೆದುಕೊಂಡರು.
ಈಗ ನನಗೆ 82 ವರ್ಷ ಇನ್ನೆಷ್ಟು ದಿನ ಬದುಕುತ್ತೀನೋ ಗೊತ್ತಿಲ್ಲ, ಜೀವನ ನನ್ನನ್ನು ಆಶ್ಚರ್ಯಪಡಿಸಲು ಸಾಧ್ಯವೇ ಇಲ್ಲ. ನಾನು ಹೀಗೆ ಆಲೋಚಿಸುವಾಗ ನನಗೆ ಮರೀನಾಳಿಂದ ಪತ್ರ ಬಂತು. ನನ್ನ ಪ್ರೀತಿಯ ಗೆಳೆಯ ಹೇಗಿದ್ದೀಯಾ ಎಂದು ಬರೆದಿದ್ದಾಳೆ. ಜೀವನಕ್ಕೆ ಮತ್ತೊಂದು ಬೆಳಕಿನ ದಾರಿ ಸಿಕ್ಕಿದೆ. ದಿನವೂ ಅವಳೆ ಕರೆ ಮಾಡುತ್ತಾಳೆ. ಮಾತನಾಡುತ್ತೇನೆ. ಜೀವನದಲ್ಲಿ ಯುವ ಉತ್ಸಾಹ ತುಂಬಿದೆ.
ಆದರೆ ಮರೀನಾ ನನಗಿಂತಲೂ ಗ್ರೇಟ್! ಆಕೆ ಇಷ್ಟು ವರ್ಷವಾದರೂ ಮದುವೆಯೇ ಆಗಿಲ್ಲ. ಶೀಘ್ರ ನಿನ್ನನ್ನು ಭೇಟಿ ಮಾಡುತ್ತೇನೆ, ಭಾರತಕ್ಕೆ ಬರುತ್ತೇನೆ ಎಂದಿದ್ದಾಳೆ. ನನ್ನ ಉತ್ಸಾಹ ಇಮ್ಮಡಿಯಾಗಿದೆ, ಮುಂದೆ ನನ್ನ ಜೀವನ ಏನಾಗುತ್ತದೋ ಗೊತ್ತಿಲ್ಲ. ಆದರೆ ಮೊದಲ ಪ್ರೇಮವನ್ನು ಮರಳಿ ಪಡೆಯೋದು ಅಸಾಧ್ಯದಲ್ಲಿ ಸಾಧ್ಯ. ಮರೀನಾಳಿಗಾಗಿ ಕ್ಷಣವೂ ಕಾಯುತ್ತಿದ್ದೇನೆ. ಹೊಸ ಹೆಜ್ಜೆ, ಹೊಸ ಜೀವನ ಮತ್ತೊಮ್ಮೆ ಆರಂಭ ಎನ್ನುತ್ತಾರೆ.