ಹೊಸ ದಿಗಂತ ವರದಿ, ಮಂಡ್ಯ :
ಚಾಲಕನ ನಿಯಂತ್ರಣ ತಪ್ಪಿದ ಕಾರು ವಿಶ್ವೇಶ್ವರಯ್ಯ ನಾಲೆಗೆ ಉರುಳಿಬಿದ್ದ ಪರಿಣಾಮ ಮೂವರು ಸಾವನ್ನಪ್ಪಿ ಓರ್ವ ಗಾಯಗೊಂಡಿರುವ ಘಟನೆ ತಾಲೂಕಿನ ತಿಬ್ಬನಹಳ್ಳಿ ಬಳಿ ನಡೆದಿದೆ.
ನಗರದ ಹಾಲಹಳ್ಳಿ ಬಡಾವಣೆಯ ಅಸ್ಲಂಪಾಷ (55), ಪೀರ್ಖಾನ್ (45), ಕಾರು ಮಾಲೀಕ ಫಯಾಜ್ ಅಲಿಯಾಸ್ ಬ್ಯಾಟರಿ ((58) ಎಂಬುವರೇ ಸಾವನ್ನಪ್ಪಿದ ದುರ್ದೈವಿಗಳಾಗಿದ್ದು, ನಯಾಜ್ ಎಂಬಾತ ಗಾಯಗೊಂಡಿದ್ದಾನೆ.
ಹುಲಿಕೆರೆ ಕಡೆಯಿಂದ ಕಾರಿನಲ್ಲಿ ಮಾಚಹಳ್ಳಿ ಮಾರ್ಗವಾಗಿ ಶಿವಳ್ಳಿಗೆ ಬರುತ್ತಿದ್ದ ವೇಳೆ ರಸ್ತೆ ಎಡ ಬದಿಯಲ್ಲಿದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್ ಇರುವ ಕಂಬಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಚಾಲಕ ಬಲಕ್ಕೆ ತಿರುಗಿಸಿದಾಗ ಆಯತಪ್ಪಿ ವಿಶ್ವೇಶ್ವರಯ್ಯ ನಾಲೆಗೆ ಉರುಳಿಬಿದ್ದಿದೆ.
ನಾಲೆಗೆ ಕಾರು ಉರುಳಿಬಿದ್ದ ರಭಸಕ್ಕೆ ದೊಡ್ಡ ಸದ್ದು ಕೇಳಿಬಂದ ಕಾರಣ ಸುತ್ತಮುತ್ತ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಾಚಹಳ್ಳಿ ರಾಜು ಇತರರು ಸ್ಥಳಕ್ಕೆ ಧಾವಿಸಿ ನಯಾಜ್ನನ್ನು ರಕ್ಷಿಸಿ ತಕ್ಷಣ ಆ್ಯಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ರವಾನಿಸಿದರು.
ಮತ್ತೊಬ್ಬರನ್ನು ಮೇಲೆತ್ತುವ ಪ್ರಯತ್ನ ಮಾಡಿದರಾದರೂ, ಸಾಧ್ಯವಾಗಲಿಲ್ಲ. ಉಳಿದ ಇಬ್ಬರು ನೀರಿನಲ್ಲಿ ತೇಲಿಕೊಂಡು ಹೋಗಿದ್ದಾರೆ. ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಇತರೆ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.