ದಲೈಲಾಮಾ ಮೇಲೆ ಬೇಹುಗಾರಿಕೆ ಮಾಡಲು ಬಂದಿದ್ದ ಚೀನಿ ಮಹಿಳೆ ಅರೆಸ್ಟ್‌ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದಲ್ಲಿ ಆಶ್ರಯಪಡೆದಿರುವ ಬೌದ್ಧ ಧರ್ಮಗುರು ದಲೈಲಾಮಾ ಅವರ ಮೇಲೆ ಬೇಹುಗಾರಿಕೆ ಮಾಡಲು ಬಂದಿದ್ದ ಚೀನಿ ಮಹಿಳೆಯನ್ನು ಕೊನೆಗೂ ಬಂಧಿಸಿರುವುದಾಗಿ ಪೋಲೀಸರು ಹೇಳಿದ್ದಾರೆ. ಬೌದ್ಧ ಧರ್ಮದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ದಲೈಲಾಮಾ ಬಿಹಾರದ ಗಯಾಕ್ಕೆ ತೆರಳಿದ್ದರು. ಆದರೆ ಚೀನಿ ಮಹಿಳೆಯೊಬ್ಬಳು ದಲೈಲಾಮಾ ಅವರ ವಿರುದ್ಧ ಬೇಹುಗಾರಿಕೆ ಮಾಡಲು ಬಂದಿದ್ದು, ಕಳೆದೊಂದು ವರ್ಷದಿಂದ ಗಯಾದ ಸಮೀಪದಲ್ಲಿಯೇ ವಾಸ ಮಾಡುತ್ತಿದ್ದಾಳೆ ಎಂದು ಗುಪ್ತವಚರ ಸಂಸ್ಥೆಗಳಿಗೆ ಮಾಹಿತಿ ಲಭಿಸಿತ್ತು. ಪೋಲೀಸರು ಭದ್ರತೆಯನ್ನು ಹೆಚ್ಚಿಸಿ ಮಹಿಳೆಗಾಗಿ ತೀವ್ರ ಶೋಧ ನಡೆಸಿದ್ದರು. ಪ್ರಸ್ತುತ ಮಹಾರಾಣಿ ರಸ್ತೆಯ ಗೆಸ್ಟ್‌ ಹೌಸ್‌ ಒಂದರಲ್ಲಿ ಅಡಗಿಕೊಂಡಿದ್ದ ಆಕೆಯನ್ನು ಬಂಧಿಸಿರುವುದಾಗಿ ಪೋಲೀಸರು ಹೇಳಿದ್ದಾರೆ.

ವೀಸಾ ನಿಯಮ ಉಲ್ಲಂಘಿಸಿ ಆಕೆ 2019 ರಿಂದಲೂ ಭಾರತದಲ್ಲಿ ನೆಲೆಸಿದ್ದಳು. 2020ರಲ್ಲಿ ಆಕೆ ನಾಲ್ಕುದಿನ ನೇಪಾಳಕ್ಕೆ ಹೋಗಿ ನಂತರದಲ್ಲಿ ಮತ್ತೆ ಭಾರತಕ್ಕೆ ವಾಪಸ್ಸಾಗಿ ಮೆಕ್ಲಿಯೋಡ್ ಗಂಜ್‌ ನಲ್ಲಿ ನೆಲೆಸಿದ್ದಳು. ಈಕೆಯನ್ನು ಸಾಂಗ್ ಕ್ಸಿಯೋಲನ್ ಎಂದು ಗುರುತಿಸಲಾಗಿದ್ದು ಡಿ.22ರಂದು ದಲೈಲಾಮಾ ಬೊಧಗಯಾಗೆ ಪ್ರವಾಸ ಕೈಗೊಂಡ ಬೆನ್ನಲ್ಲೇ ಈ ಮಹಿಳೆಯೂ ಕೂಡ ಗಯಾಗೆ ಬಂದು ನೆಲೆಸಿದ್ದಳು ಎನ್ನಲಾಗಿದೆ. “ಧರ್ಮಶಾಲಾದಲ್ಲಿ ಭೇಟಿಯಾದ ನೇಪಾಳದ ಇನ್ನೊಬ್ಬ ಮಹಿಳೆ ಅವಳೊಂದಿಗೆ ಬಂದಿದ್ದಳು. ನೇಪಾಳದ ಮಹಿಳೆಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ” ಎಂದು ಪೋಲೀಸರು ಹೇಳಿದ್ದಾರೆ.

ಚೀನಾದ ಪ್ರಜೆಯ ವೀಸಾವನ್ನು ಕೋಲ್ಕತ್ತಾದ ಎಫ್‌ಆರ್‌ಆರ್‌ಒ ರದ್ದುಗೊಳಿಸಿದೆ ಮತ್ತು ಆಕೆಗೆ ಭಾರತ ತೊರೆಯುವಂತೆ ನೋಟಿಸ್ ನೀಡಲಾಗಿದೆ. ಅದರಂತೆ ಆಕೆಯನ್ನು ವಾಪಸಾತಿಗಾಗಿ ದೆಹಲಿಗೆ ಕಳುಹಿಸಲಾಗುವುದು ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!