ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಗಾಯಕ ಉದಿತ್ ನಾರಾಯಣ್ ವಾಸವಾಗಿರುವ ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದೆ.
ಜನವರಿ 6 ರಂದು ರಾತ್ರಿ 9.15 ರ ಸುಮಾರಿಗೆ ಅಂಧೇರಿಯ ಶಾಸ್ತ್ರಿನಗರದಲ್ಲಿರುವ ಸ್ಕೈಪೆನ್ ಅಪಾರ್ಟ್‌ಮೆಂಟ್‌ನಲ್ಲಿ ಈ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾರೆ.
ಸ್ಕೈಪೆನ್ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕೆಲವೇ ಕ್ಷಣದಲ್ಲಿ ಕಟ್ಟಡದ ಹಲವು ಮಹಡಿಗಳಿಗೆ ಬೆಂಕಿ ವೇಗವಾಗಿ ಹರಡಿದ್ದು, ನಿವಾಸಿಗಳು ಭಯದಲ್ಲಿ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡ ವಿಚಾರ ತಿಳಿಯುತ್ತಿದ್ದಂತೆ ತಕ್ಷಣ ಅಗ್ನಿಶಾಮಕ ತಂಡ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿದೆ. ಬಳಿಕ ಪರಿಸ್ಥಿತಿ ತಿಳಿಗೊಂಡಿದೆ. ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದು ಕಟ್ಟಡವನ್ನು ತೆರವು ಮಾಡಿದರು.
ವಿಕ್ಕಿ ಲಾಲ್ವಾನಿ ಎಂಬುವರು ತಮ್ಮ ಇನ್‌ಸ್ಟಾಗ್ರಾಮ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಗಾಯಕ ಉದಿತ್ ನಾರಾಯಣ್ ಅವರ ಪಕ್ಕದ ಮನೆಯವರಾದ ರಾಹುಲ್ ಮಿಶ್ರಾ ಎಂಬಾತ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ್ದಾರೆ.
ಬೆಂಕಿ ಹೊತ್ತಿಕೊಂಡ ಬಳಿಕ ಮಿಶ್ರಾ ಗಾಯಗೊಂಡಿದ್ದು, ತಕ್ಷಣವೇ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಚಿಕಿತ್ಸೆಗೆ ರಾಹುಲ್ ಮಿಶ್ರಾ ಸ್ಪಂದಿಸಿಲ್ಲ. ಚಿಕಿತ್ಸೆ ಫಲಿಸದೆ ಮಿಶ್ರಾ ಅವರು ಸಾವನ್ನಪ್ಪಿದ್ದಾರೆ.
ಬೆಂಕಿ ಅವಘಡ ಸಂಭವಿಸಿದ್ದ ಈ ಕಟ್ಟಡದಲ್ಲಿ ವಾಸಿಸುತ್ತಿದ್ದ ಗಾಯಕ ಉದಿತ್ ನಾರಾಯಣ್ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಪಕ್ಕದ ಮನೆಯ ರಾಹುಲ್ ಮಿಶ್ರಾ ಸಾವಿಗೆ ಗಾಯಕ ಕಂಬನಿ ಮಿಡಿದಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಇದು ವಿದ್ಯುತ್ ದೋಷದಿಂದ ಸಂಭವಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.