ರೈತ ಸಮುದಾಯದ ನೆರವಿಗೆ ನಿಂತ ಸ್ನೇಹ ತಂಡ

  • ನಿತೀಶ ಡಂಬಳ

    ಹೊಸದಿಗಂತ ವರದಿ ಹುಬ್ಬಳ್ಳಿ:

ಧಾರವಾಡ ಕೇವಲ ವಿದ್ಯಾಕಾಶಿಯಲ್ಲ. ಕೃಷಿಕರಿಗೂ ಕಾಶಿಯಾಗಿರುವುದಕ್ಕೆ ಪ್ರತಿ ವರ್ಷ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಕೃಷಿ ಮೇಳವೆ ಸಾಕ್ಷಿ. ಈ ಬಾರಿಯ ಕೃಷಿ ಮೇಳ ಲಕ್ಷಾಂತರ ಜನರಿಂದ ವೀಕ್ಷಿಸಲ್ಪಿಟ್ಟಿದ್ದು, ಅನೇಕ ವೈಶಿಷ್ಟ್ಯತೆಗಳಿಂದ ಕೂಡಿತ್ತು.

ಕೃಷಿ ಕ್ಷೇತ್ರದ ಉನ್ನತಿಗೆ ಕೇವಲ ರೈತ ಸಮುದಾಯ ಹಾಗೂ ಸರ್ಕಾರ ಮಾತ್ರ ಶ್ರಮಪಟ್ಟರೆ ಸಾಲದು. ಆಧುನಿಕ ತಂತ್ರಜ್ಞಾನದ ಉಪಯೋಗ ಹಾಗೂ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ಉತ್ಸಾಹಿ ಯುವಪಡೆ ಇದ್ದಾಗ ಕೃಷಿಯಲ್ಲಿ ನಾವಿನ್ಯತೆ ತರಬಹುದು. ಇದನ್ನು ಮನಗಂಡ ಕೃಷಿ ವಿವಿಯ ಕೆಲ ವಿದ್ಯಾರ್ಥಿಗಳು 2004 ರಲ್ಲಿ ’ಸ್ನೇಹ ತಂಡ’ ಎಂಬ ವಿದ್ಯಾರ್ಥಿಗಳ ಸಂಘಟನೆಯೊಂದನ್ನು ಆರಂಭಿಸಿದರು.

ಕೃಷಿಗೆ ಪೂರಕವಾಗಿ ಮನೆಯಲ್ಲೇ ನಿರ್ಮಿಸಬಹುದಾದ ಸಣ್ಣ ಯಂತ್ರಗಳು, ಬೆಳೆಗಳಿಗೆ ಬರುವ ರೋಗ ಹಾಗೂ ಅದರ ಚಿಕಿತ್ಸೆ, ಯಂತ್ರಗಳ ಪಾತ್ಯಕ್ಷಿಕೆ, ಮಣ್ಣಿನ ಫಲವತ್ತತೆ ಕಾಪಾಡಲು ಪಾಲಿಸಬೇಕಾದ ಸೂತ್ರಗಳು, ಹೊಸ ತಳಿಗಳ ಪರಿಚಯ, ರೈತರಿಕೆ ಅಗತ್ಯವಿರುವ ಮಾಹಿತಿ, ಸಂದೇಹಗಳಿಗೆ ಉತ್ತರ ಮುಂತಾದ ಕಾರ್ಯಗಳನ್ನು ಸ್ನೇಹ ತಂಡದ ಸದಸ್ಯರು ಪ್ರತಿ ವರ್ಷ ನಡೆಯುವ ಕೃಷಿ ಮೇಳದಲ್ಲಿ ರೈತರಿಗೋಸ್ಕರ ಮಾಡುತ್ತಿದ್ದಾರೆ. ಜೊತೆಗೆ ಈ ಎಲ್ಲ ಮಾಹಿತಿಗಳನ್ನು ಕ್ರೋಢಿಕರಿಸಿ ’ಬತ್ತಳಿಕೆ’ ಎಂಬ ಪುಸ್ತಕ ಹೊರತಂದು ರೈತಾಪಿ ವರ್ಗಕ್ಕೆ ನೆರವಾಗಿದ್ದಾರೆ. ಈ ಪುಸ್ತಕದಲ್ಲಿನ ಸರಳ ಕೃಷಿ ಕಾರ್ಯ ವಿಧಾನಗಳನ್ನು ರೈತರು ಓದಿ, ತಮ್ಮ ಕೃಷಿ ಭೂಮಿಯಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.

ಸ್ನೇಹ ತಂಡ ಇದು ಕೃಷಿ ವಿವಿ ವಿದ್ಯಾರ್ಥಿಗಳ ಸಮೂಹ. ವಿವಿಯ ಪ್ರಾಧ್ಯಾಪಕರು ಹಾಗೂ ಹಳೆ ವಿದ್ಯಾರ್ಥಿಗಳು ಇದಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಪ್ರತಿ ಎರಡು ತಿಂಗಳಿಗೆ ಸಭೆ ಸೇರಿ ಹೊಸ ಆವಿಷ್ಕಾರ, ಪ್ರಯೋಗಗಳ ಕುರಿತು ಚರ್ಚೆ ನಡೆಸುತ್ತಾರೆ. ವರ್ಷದಲ್ಲಿ ಎರಡು ಬಾರಿ ಕ್ಷೇತ್ರ ವೀಕ್ಷಣೆ, ಸಾಧಕ ಕೃಷಿಕರೊಂದಿಗೆ ಸಂವಾದ, ಪ್ರತಿ ವರ್ಷ ದೊರೆಯುವ ಅನುದಾನದಿಂದ ಕೃಷಿ ಪೂರಕ ಯಂತ್ರಗಳ ಆವಿಷ್ಕಾರ ಮುಂತಾದ ಕಾರ್ಯಗಳನ್ನು ಸ್ನೇಹ ತಂಡ ಕೈಗೊಳ್ಳುತ್ತದೆ.

ಈ ವರ್ಷದ ಆವಿಷ್ಕಾರಗಳು:
ತರಕಾರಿ ತೊಳೆಯುವ ಯಂತ್ರ, ಸೈಕಲ್ ಚಾಲಿತ ನೀರೆತ್ತುವ ಯಂತ್ರ, ಈರುಳ್ಳಿ ಎಲೆ ಕತ್ತರಿಸುವ ವಿಧಾನ, ಸಮಸ್ಯಾತ್ಮಕ ಮಣ್ಣಿನ ನಿರ್ವಹಣೆ, ಹಣ್ಣು ಮಾಗಿಸುವುದು, ಮೇವಿನ ಸದ್ಬಳಕೆ, ಕಬ್ಬಿನ ಬೆಳೆಯಲ್ಲಿ ಹೆಚ್ಚಿನ ಇಳುವರಿಗಾಗಿ ಸೂತ್ರಗಳು, ಮೆಣಸಿಕಾಯಿಯಲ್ಲಿನ ಕಪ್ಪು ನುಸಿಗೆ ಚಿಕಿತ್ಸೆ, ಹಸಿರೆಲೆ ಗೊಬ್ಬರ, ಜಾನುವಾರುಗಳಲ್ಲಿ ವೈರಾಣುಗಳಿಂದ ಕಂಡು ಬರುವ ರೋಗಗಳ ನಿರ್ವಹಣೆ, ನ್ಯಾನೋ ಯೂರಿಯಾ ಕುರಿತು ಮಾಹಿತಿ ಇತ್ಯಾದಿಗಳು ಈ ವರ್ಷದ ಕೃಷಿ ಮೇಳದಲ್ಲಿ ಸ್ನೇಹ ತಂಡದಿಂದ ಪ್ರಸ್ತುತವಾಗಿದ್ದವು.

ಬತ್ತಳಿಕೆ ಪುಸ್ತಕದಲ್ಲಿ ತಂತ್ರಜ್ಞಾನಗಳ ಬಾಣ ಸಂಗ್ರಹಿಸಲಾಗಿದೆ. ರೈತ ಸಮುದಾಯಕ್ಕೆ ಇದೊಂದು ಉಪಯುಕ್ತ ಸಾಮಗ್ರಿ. ಸ್ನೇಹ ತಂಡದ ವಿದ್ಯಾರ್ಥಿಗಳು ಸೃಜನಶೀಲ, ಹೊಸತನದ ರೂವಾರಿಗಳಾಗಿದ್ದಾರೆ.
ಪ್ರಸ್ತುತ ಸ್ನೇಹ ತಂಡದಲ್ಲಿ 60 ಸದಸ್ಯರಿದ್ದೇವೆ. ಪ್ರತಿ ವರ್ಷ ಆವಿಷ್ಕಾರಗೊಂಡ ಹೊಸ ತಂತ್ರಜ್ಞಾನಗಳನ್ನು ರೈತರಿಗೆ ಪ್ರಚಾರ ಪಡಿಸುತ್ತಿದ್ದೇವೆ. ಸೇವಾ ಮನೋಭಾವದಿಂದ ಸ್ನೇಹಿತರೆಲ್ಲ ಸ್ವಯಂಪ್ರೇರಿತರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಸ್ನೇಹ ತಂಡದ ಸದಸ್ಯ ಭರತ ಮುಳಗುಂದ ಹೊಸ ದಿಗಂತಕ್ಕೆ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!