ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ತಿಳಿಸೋಕೆ ಹೀಗೊಂದು ʼಕನ್ನಡಶಾಲಾ ಮಕ್ಕಳ ಹಬ್ಬʼ: ಏನಿದರ ವಿಶೇಷತೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ ಆತ್ಮವಿಶ್ವಾಸದ ಅಭಿವೃದ್ಧಿ, ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಅರಿವು ಮೂಡಿಸಲು ಕೇಶವ ಸ್ಮೃತಿ ಸಂವರ್ಧನ ಸಮಿತಿಯ ವತಿಯಿಂದ ಮಂಗಳೂರಿನ ಸಂಘನಿಕೇತನದಲ್ಲಿ ನ.19 ರಿಂದ 20ರವರೆಗೆ ʼಕನ್ನಡ ಶಾಲಾ ಮಕ್ಕಳ ಹಬ್ಬʼವನ್ನು ಆಯೋಜಿಸಲಾಗಿದೆ. ಕನ್ನಡ ಭಾಷೆಯ ಹಿರಿಮೆಯನ್ನು ಸಾರುವ ಅನೇಕ ಕಾರ್ಯಕ್ರಮಗಳು ನಡೆಯುತ್ತವೆಯಾದರೂ ಕನ್ನಡಶಾಲಾ ಮಕ್ಕಳನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಮಕ್ಕಳನ್ನೇ ಕೇಂದ್ರೀಕೃತವಾಗಿಸಿಕೊಂಡು ಅವರಲ್ಲಿನ ಭಾಷಾಪ್ರೇಮವನ್ನು ಹೆಚ್ಚಿಸುವಂತ ಮಾಡುವ ಈ ʼಕನ್ನಡ ಶಾಲಾ ಮಕ್ಕಳ ಹಬ್ಬವುʼ ಉಳಿದೆಲ್ಲ ಕಾರ್ಯಕ್ರಮಗಳಿಗಿಂತ ತುಸು ಭಿನ್ನ ಎನಿಸಿದೆ.

ಮಕ್ಕಳಲ್ಲಿ ಭಾಷೆಯ ಬಗೆಗೆಗಿನ ಒಲವು ಹೆಚ್ಚಿಸಲು ವಿವಿಧ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದರ ಜೊತೆಗೆ ಭಾಷೆಯ ಕುರಿತಾಗಿ ಅವರ ತಿಳುವಳಿಕೆ ಹೆಚ್ಚಿಸಲು ವಿವಿಧ ಚಿಂತನಾಗೋಷ್ಟಿಗಳನ್ನೂ, ಸಂವಾದ ಕಾರ್ಯಕ್ರಮಗಳನ್ನೂ ಜೊತೆಗೆ ಉಪನ್ಯಾಸಗಳನ್ನೂ ಆಯೋಜಿಸಿರುವುದು ಈ ಹಬ್ಬದ ವೈಶಿಷ್ಟ್ಯ. ಕನ್ನಡ ಶಾಲಾ ಮಕ್ಕಳಿಗೆ ಸ್ವಚ್ಛ ಭಾರತ, ಸ್ವಸ್ಥ ಭಾರತ, ಹೆಣ್ಣುಗಂಡು ಸಮಾನತೆ, ಆತ್ಮನಿರ್ಭರ ಭಾರತ ಇತ್ಯಾದಿ ವಿಷಯಗಳ ಕುರಿತಾಗಿ ಕನ್ನಡಭಾಷೆಯಲ್ಲೇ ಕಿರು ಪ್ರಾತ್ಯಕ್ಷಿಕೆ ಪ್ರದರ್ಶಿಸಲು ವೇದಿಕೆ ಒದಗಿಸಲಾಗಿದೆ.

ಇದರ ಜೊತೆಗೆ ಮಕ್ಕಳಲ್ಲಿ ತಿಳುವಳಿಕೆ ಹೆಚ್ಚಿಸಲು ಐಎಎಸ್‌ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನಗಳಿಸಿ ಐಎಎಸ್‌ ಅಧಿಕಾರಿಯಾಗಿರುವ ನಂದಿನಿ ಕೆ.ಆರ್‌. ಅವರೊಂದಿಗೆ ಮಕ್ಕಳ ಸಂವಾದವನ್ನು ಆಯೋಜಿಸಲಾಗಿದೆ. ಜೊತೆಗೆ ಪೋಷಕರ ಜೊತೆ ಖ್ಯಾತ ಚಿಂತಕರಾದ ರೋಹಿತ್‌ ಚಕ್ರತೀರ್ಥ ಸಂವಾದ ನಡೆಸಲಿದ್ದಾರೆ. ಖ್ಯಾತ ಭಾಷಣಕಾರ ಚಕ್ರವರ್ತಿ ಸೂಲಿಬೆಲೆಯವರು ʼಕನ್ನಡ ಎಂದರೆ ಬರಿ ನುಡಿ ಅಲ್ಲʼ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಇದಲ್ಲದೇ ಇನ್ನೂ ಹತ್ತು ಹಲವು ವಿಭಿನ್ನ, ವಿಶಿಷ್ಟ, ವಿನೂತನ ವೈಚಾರಿಕ ಕಾರ್ಯಕ್ರಮಗಳು ಆಯೋಜನೆಯಾಗಿವೆ.

ಉದ್ಘಾಟನೆಯಲ್ಲಿ ರಾಜ್ಯದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಭಾಗವಹಿಸಲಿದ್ದು ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಸೇರಿದಂತೆ ಇತರ ಗಣ್ಯರು ಅತಿಥಿಗಳಾಗಿರಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗವಹಿಸಲಿದ್ದಾರೆ. ಎರಡು ದಿನ ನಡೆಯಲಿರುವ ಈ ಹಬ್ಬದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಕುದ್ರೋಳಿ ಗಣೇಶ್‌ ಅವರಿಂದ ಜಾದೂ ಪ್ರದರ್ಶನ, ಜೀವನ್‌ ರಾಮ್‌ ಸೂಳ್ಯ ಇವರಿಂದ ರಂಗಾಭಿನಯ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!