ಹಸು ಕಟ್ಟಲು ಹೋದ ಮಹಿಳೆ ಮೇಲೆ ಚಿರತೆ ದಾಳಿ

ಹೊಸದಿಗಂತ ವರದಿ,ಮಂಡ್ಯ :

ಕೊಟ್ಟಿಗೆಗೆ ಹಸು ಕಟ್ಟಿಹಾಕಲು ಹೋದ ರೈತ ಮಹಿಳೆ ಮೇಲೆ ಚಿರತೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದೇವರಾಜು ಪತ್ನಿ ಬಸಮ್ಮಣ್ಣಿ (30) ಎಂಬಾಕೆಯೇ ಚಿರತೆ ದಾಳಿಯಿಂದ ಗಾಯಗೊಂಡವರಾಗಿದ್ದಾರೆ.
ಇಂದು ಬೆಳಗ್ಗೆ ಎಂದಿನಂತೆ ಹಸು ಕಟ್ಟಿಹಾಕಲು ಮನೆಯ ಹಿಂಭಾಗದಲ್ಲಿದ್ದ ಕೊಟ್ಟಿಗೆಗೆ ತೆರಳಿದ್ದರು. ಈ ವೇಳೆ ಅವಿತು ಕುಳಿತಿದ್ದ ಚಿರತೆ ಏಕಾಏಕಿ ಆಕೆಯ ಮೇಲೆ ದಾಳಿ ಮಾಡಿದೆ. ಇದರಿಂದ ಒಂದು ಕ್ಷಣ ಬಸಮ್ಮಣ್ಣಿ ಗಾಭರಿಗೊಂಡರಾದರೂ, ಸುಧಾರಿಸಿಕೊಂಡು ಕಾಲಿನಿಂದ ಅದನ್ನು ಒದ್ದು ದೂರಕ್ಕೆ ತಳ್ಳಿದ್ದಾರೆ. ಅಷ್ಟರಲ್ಲಿ ಆಕೆಯ ಕಾಲುಗಳನ್ನು ಕಚ್ಚಿದ ಚಿರತೆ ಒದ್ದ ರಭಸಕ್ಕೆ ಗುಂಡಿಗೆ ಬಿದ್ದಿದೆ.
ಚಿರತೆಯನ್ನು ಕಂಡ ಹಸುಗಳು ಓಟ ಕಿತ್ತಿವೆ. ಹಸುಗಳನ್ನು ಹಿಂಭಾಲಿಸಿದ ಚಿರತೆ ಕೂಡ ದೂರಕ್ಕೆ ಓಡಿ ಮರೆಯಾಗಿದೆ.
ಬಸಮ್ಮಣ್ಣಿಯ ಕಿರುಚಾಟದಿಂದ ಎಚ್ಚೆತ್ತ ಮನೆಯವರು ತಕ್ಷಣ ಧಾವಿಸಿ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಸುದ್ಧಿ ತಿಳಿದ ತಕ್ಷಣ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅವ್ವೆರಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ ಹಲವಾರು ದಿನಗಳಿಂದಲೂ ಚಿರತೆ ಓಡಾಡುತ್ತಿತ್ತು. ಇಂದು ಬೆಳಗ್ಗೆ ಏಕಾಏಕಿ ದಾಳಿ ಮಾಡಿದೆ. ಒಂದು ವೇಳೆ ಹಸುಗಳನ್ನು ಓಡಿದ್ದನ್ನು ಗಮನಿಸಿ ಚಿರತೆ ಓಟ ಕೀಳದಿದ್ದರೆ ಅನಾಹುತ ಸಂಭವಿಸುತ್ತಿತ್ತು ಎಂದು ಗ್ರಾಮದ ಮುಖಂಡ ನಾಗಣ್ಣ ತಿಳಿಸಿದ್ದಾರೆ.
ಚಿರತೆ ಸೆರೆಹಿಡಿಯಲು ಗ್ರಾಮದಲ್ಲಿ ಅರಣ್ಯ ಇಲಾಖೆ ಬೋನನ್ನು ಇಟ್ಟಿದ್ದುಘಿ, ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಶೀಘ್ರ ಚಿರತೆಯನ್ನು ಹಿಡಿದು ಕಾಡಿಗೆ ಬಿಡುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಮತ್ತು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!