ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಯುವಕನೊಬ್ಬ ತನ್ನ ವಿನೂತನ ಶೈಲಿಯಲ್ಲಿ ಪ್ಯಾಂಟ್ ಧರಿಸಿ ಮಾರುಕಟ್ಟೆಗೆ ಬಂದಾಗ ಮೂರು ಜನರ ಪುಂಡರ ಗುಂಪು ಆತನನ್ನು ತಡೆದು ನಿಲ್ಲಿಸಿ ಆತನ ಎರಡು ಕೈಗಳನ್ನು ಹಿಂದಕ್ಕೆ ಲಾಕ್ ಮಾಡಿ ಹಿಡಿದು ಪ್ಯಾಂಟ್ ಗೆ ಗೋಣಿಚೀಲದ ಸೂಜಿಯಿಂದ ಹೊಲಿದು ಅದರ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದರಿಂದ ಮನನೊಂದ ಯುವಕ ಸಂಜೆ ವೇಳೆಗೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಪಣಕಜೆಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಪಣಕಜೆ ನಿವಾಸಿ ಮುಹಮ್ಮದ್ ಹಾಯಿಫ್ ಎಂಬವರ ಪುತ್ರ ಶಾಹಿಲ್ (21) ಎಂಬ ಯುವಕ ಜೀವಣ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈಗಿನ ನವೀನ ( ಅಲ್ಲಲ್ಲಿ ಹರಿದಂತೆ ಇರುವ) ಶೈಲಿಯ ಪ್ಯಾಂಟ್ ಧರಿಸಿ ನ.21 ರಂದು ಮಧ್ಯಾಹ್ನ ಬೆಳ್ತಂಗಡಿ ಪಟ್ಟಣದಲ್ಲಿರುವ ಸಂತೆಕಟ್ಟೆ ಬಂದಿದ್ದ. ಇದನ್ನು ಗಮನಿಸಿದ ಮಾ ರುಕಟ್ಟೆಯಲ್ಲಿದ್ದ ಪಡ್ಡೆ ಯುವಕರ ತಂಡವೊಂದು ಆತನನ್ನು ಹಿಡಿದು ಅವರಲ್ಲಿ ಓರ್ವ ಆತನ ಎರಡೂ ಕೈಗಳನ್ನು ಬಲವಂತದಿಂದ ಹಿಂದಕ್ಕೆ ಹಿಡಿದಿಟ್ಟು ಆತನ ಪ್ಯಾಂಟನ್ನು ಗೋಣಿ ಹೊಲಿಯುವ ದಬ್ಬಣದಿಂದ ಹೊಲಿದಿದ್ದಾರೆ. ಇದೇ ವೇಳೆ ಇನ್ನೋರ್ವ ಮೊಬೈಲ್ ನಲ್ಲಿ ವೀಡಿಯೊ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಪಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ ಶಬೀರ್ , ಅನೀಶ್ ಪಣಕಜೆ, ಲಾಯಿಲ ಗ್ರಾಮದ ಆದರ್ಶ ನಗರ ನಿವಾಸಿ ಸಲೀಂ ಎಂಬವರು ಸೇರಿ ಈ ದುಷ್ಕ್ರತ್ಯ ನಡೆಸಿದ್ದಾರೆ ಎನ್ನಲಾಗಿದೆ.
ವಿಡಿಯೋ ಮಾಡಿ ಟ್ರೋಲ್ ಮಾಡಿದರಿಂದ ಮಾನಸಿಕವಾಗಿ ನೊಂದ ಶಾಹಿಲ್ ನ.21 ರಂದು ಸಂಜೆ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ತಕ್ಷಣ ಚಿಕಿತ್ಸೆಗಾಗಿ ಮನೆಯವರು ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದು ಪ್ರಥಮ ಚಿಕಿತ್ಸೆಯ ನಂತರ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಆಸ್ಪತ್ರೆಗೆ ಸಾಗಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ. ಈ ಘಟನೆ ಬಗ್ಗೆ ಸಾರ್ವಜನಿಕರು ಈ ಮೂವರು ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಮನವಿ ಮಾಡುತ್ತಿದ್ದಾರೆ.