ಕಂಚು, ಹಿತ್ತಾಳೆ ಕರಕುಶಲತೆಗೆ ಪ್ರಸಿದ್ಧಿ ಪಡೆದ ಹಣಗಂಡಿ

– ಮಲ್ಲಿಕಾರ್ಜುನ ತುಂಗಳ

ಅನಾದಿ ಕಾಲದಿಂದಲೂ ಕಂಚು ಹಾಗೂ ಹಿತ್ತಾಳೆಯಲ್ಲಿ ಕರಕುಶಲತೆ ನಿರ್ವಹಿಸುತ್ತಿರುವ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಣಗಂಡಿ ಗ್ರಾಮದ ಲಾಳಕೆ ಕುಟುಂಬ ಎಡಬಿಡದೆ ಕಾಯಕದಲ್ಲಿ ತೊಡಗಿ ಇದೀಗ ಸಾಗರೋತ್ತರದಲ್ಲೂ ತಮ್ಮ ಪ್ರತಿಭೆಯ ಧ್ವನಿಯಾಗುವಲ್ಲಿ ಕಾರಣವಾಗಿರುವುದು ವಿಶೇಷ

ಕಂಚಗಾರಿಕೆಯನ್ನೇ ಮೂಲ ವೃತ್ತಿಯನ್ನಾಗಿಸಿಕೊಂಡಿರುವ ಹಣಗಂಡಿ ಗ್ರಾಮದಲ್ಲಿ 10ಕ್ಕೂ ಅಕ ಕುಟುಂಬಗಳು ಇದರಲ್ಲಿಯೇ ಮುಂದುವರೆದಿದ್ದಾರೆ. ಅದರಲ್ಲಿ ಲಾಳಕಿ ಕುಟುಂಬ ತೀರಾ ಹಳೆಯ ಕಾಲದಿಂದಲೂ ನಡೆಸಿಕೊಂಡು ನಾಲ್ಕೈದು ತಲೆಮಾರುಗಳಿಂದ ಕರಕುಶಲ ವೃತ್ತಿಯಲ್ಲಿ ತೊಡಗಿ ಇಂದಿಗೂ ಮನೆಯ ಸುಮಾರು ಏಳೆಂಟು ಜನ ವೃತ್ತಿಯಲ್ಲಿದ್ದಾರೆ. ಮೊದಲು ತಾಳ, ಗಂಗಾಳ, ಜಾಂಗಟಿ, ತಾಬಾನಾ ತಯಾರಿಕೆಯಲ್ಲಿ ಮಾತ್ರ ಇದ್ದರು. ನಾಲ್ಕು ದಶಕಗಳಿಂದ ದೇವರ ಮೂರ್ತಿಗಳಿಂದ ಹಿಡಿದು ಮಹಾನುಭಾವರ ಪುತ್ಥಳಿ ತಯಾರಿಕೆ, ದೇವಾಲಯ ಬಾಗಿಲು ಚೌಕಟ್, ಕಳಶ, ಮೂರ್ತಿಗಳ ಕವಚದಲ್ಲೂ ಪ್ರಾವೀಣ್ಯತೆ ಪಡೆದಿರುವುದು ಗಮನಾರ್ಹ.
ವಿದೇಶದಲ್ಲಿ ಮಿಂಚಿದ ಮೂರ್ತಿಗಳು

ಶಿವನ ಮೂರ್ತಿ ಸೇರಿದಂತೆ ವಿವಿಧ ಮೂರ್ತಿಗಳು ಅಮೆರಿಕಾ ಹಾಗೂ ಆಸ್ಟ್ರೇಲಿಯಾ ದೇಶಗಳಿಗೆ ವಾಸ ಮಾಡುವ ಸ್ವದೇಶಿಗರು ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ಎಷ್ಟೋ ಮೂರ್ತಿಗಳು ರವಾನೆಯಾಗಿದ್ದು, ಗಮನಕ್ಕಿಲ್ಲ ಎನ್ನುತ್ತಾರೆ ಎಪ್ಪತ್ತೆರಡರ ವೃದ್ಧ ಈಶ್ವರ ಲಾಳಕಿ.

12.5 ಅಡಿ ಕಂಚಿನ ಮೂರ್ತಿ:

ಮೂರ್ತಿ ತಯಾರಿಯಲ್ಲಿ ಅತಿ ಹೆಚ್ಚಿನ ಎತ್ತರವೆಂದರೆ 12.5 ಅಡಿಯಷ್ಟು ಎತ್ತರದ ಸಂಗೊಳ್ಳಿ ರಾಯಣ್ಣನ ಮೂರ್ತಿ ತಯಾರಿಸಿದ್ದು, ಬಾಗಲಕೋಟೆ ಮುಧೋಳ ತಾಲೂಕಿನ ರೂಗಿ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಾರೂಗೊಪ್ಪ ಗ್ರಾಮದಲ್ಲಿ ಪ್ರತಿಷ್ಠಾನಗೊಂಡಿವೆ.

ಅಲ್ಲದೆ 6 ಅಡಿ ಎತ್ತರದ ಕನಕದಾಸ, ಮಹರ್ಷಿ ಭಗೀರಥ ಸೇರಿದಂತೆ ಅನೇಕ ಮೂರ್ತಿಗಳನ್ನು ನಿರ್ಮಾಣ ಮಾಡುವ ಮೂಲಕ ತಮ್ಮ ಕಲಾ ಕೌಶಲ್ಯದ ಸಿರಿವಂತಿಕೆ ತೋರಿಸುವಲ್ಲಿ ಸೈ ಎನ್ನಿಸಿಕೊಂಡಿದ್ದು, ದಕ್ಷಿಣ ಭಾರತದ ಬಹುತೇಕ ರಾಜ್ಯಗಳಿಂದ ಜನರು ಹಣಗಂಡಿ ಗ್ರಾಮಕ್ಕೆ ಬಂದು ತಮಗೆ ಬೇಕಾದ ಮಾದರಿಯ ಮೂರ್ತಿ ಮಾಡುವಂತೆ ಬೇಡಿಕೆ ಇಡ್ತಾರೆ. ಯಾವುದೇ ಮೂರ್ತಿ ಕಠಿಣವಾಗುವುದಿಲ್ಲವೆಂಬ ಮಾತು ಲಾಳಕೆ ಕುಟುಂಬದ್ದು. ಪೂರ್ತಿಯಾದ ಬಳಿಕ ಹಣ ಕೊಟ್ಟು ಮೂರ್ತಿಯನ್ನು ತೆಗೆದುಕೊಂಡು ಹೋಗುತ್ತಾರೆ.

ರಾತ್ರಿ ಹಾಗೂ ಬೆಳಗಿನ ಸಮಯಕ್ಕೆ ಉರಿಯುವ ಕೆಂಡದಲ್ಲಿ ಹಿತ್ತಾಳೆ, ತಾಮ್ರದ ವ್ಯರ್ಥ ವಸ್ತುಗಳನ್ನು ಕಾಯಿಸಿ, ದ್ರವ ಸೃಷ್ಟಿಸುತ್ತಾರೆ. ನಂತರ ಮೊದಲೇ ತಯಾರಿಸಿದ ಮಣ್ಣಿನಿಂದ ಮುಚ್ಚಿದ ಮೇಣದ ತದ್ರೂಪಿಗೆ ಆ ದ್ರವ ಸುರಿಯುತ್ತಾರೆ. ಒಂದು ದಿನ ಬಿಟ್ಟು ಅದನ್ನು ಮಣ್ಣಿನಿಂದ ತೆಗೆದು ಅದಕ್ಕೆ ಸ್ವರೂಪ ನೀಡುತ್ತಾರೆ. ಆದರೆ, ಈ ಪ್ರಕ್ರಿಯೆಯಲ್ಲಿ ಎಚ್ಚರ ತಪ್ಪಿದರೆ ಬಿಸಿ ದ್ರವ ಮೈ ಸುಡುವದು ಕಟ್ಟಿಟ್ಟ ಬುತ್ತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!