ಶಿಕ್ಷಣದ ಜೊತೆ ಕ್ರೀಡಾ ಮನೋಭಾವ ಬೆಳೆಸಬೇಕು: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

ಹೊಸದಿಗಂತ ವರದಿ,ಚಿತ್ರದುರ್ಗ:

ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರೀಡಾ ಮನೋಭಾವ ಬೆಳೆಸುವ ಕೆಲಸ ಮಾಡಬೇಕಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ತಾಲೂಕಿನ ಕೆ.ಬಳ್ಳೆಕಟ್ಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶಾಲಾ ಕಟ್ಟಡ ಮತ್ತು ಸ್ವಚ್ಛ ಭಾರತ ಅಭಿಯಾನದಡಿ ಹಸಿ-ಒಣ ಕಸ ವಿಲೇವಾರಿಗೆ ಕಸದ ಬಟ್ಟಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಳ್ಳೆಕಟ್ಟೆ ಗ್ರಾಮಕ್ಕೆ ಸುಮಾರು ೧೬ ಲಕ್ಷ ವೆಚ್ಚದಲ್ಲಿ ಸುಸಜ್ಜಿವಾದ ವಿಶಾಲವಾದ ಶಾಲಾ ಕೊಠಡಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಸದ್ಯಕ್ಕೆ ಯಾವುದೇ ಕೊಠಡಿ ತೊಂದರೆ ಇಲ್ಲ. ಹೆಚ್ಚು ಮಕ್ಕಳನ್ನು ದಾಖಲು ಮಾಡುವ ಅವಶ್ಯಕತೆ ಇದೆ ಎಂದರು.
ಮಕ್ಕಳಿಗೆ ಶಿಕ್ಷಣವನ್ನು ನೀಡಿದರೆ ಉಳಿದ ಎಲ್ಲಾ ಸೌಲಭ್ಯಗಳು ದೊರಕುತ್ತದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಉತ್ತಮವಾಗಿ ಪಡೆದರೆ ಉಳಿದ ಹಂತಗಳಲ್ಲಿ ಯಶಸ್ವಿಯಾಗಿ ಗುರಿ ಮುಟ್ಟುವ ವಿಶ್ವಾಸ ಮಕ್ಕಳಲ್ಲಿ ಮೂಡುತ್ತದೆ. ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳ ಕಡೆಗೆ ಮಕ್ಕಳು ಹೆಚ್ಚು ಹೆಚ್ಚು ದಾಖಲಾಗಬೇಕು ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಖಾಸಗಿ ಶಾಲೆಗಳನ್ನು ಬಿಟ್ಟು ಸರ್ಕಾರಿ ಶಾಲೆಗಳಿಗೆ ಹೆಚ್ಚು ದಾಖಲಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ಲಕ್ಷಾಂತರ ರೂಪಾಯಿ ಖಾಸಗಿ ಶಾಲೆಗಳಿಗೆ ಕಟ್ಟುವ ಬದಲು ಸರ್ಕಾರಿ ಶಾಲೆಗೆ ಅದರ ಅರ್ಧ ಹಣ ದೇಣಿಗೆ ನೀಡಿದರೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಿಂತ ಹೆಚ್ಚು ಗುಣಮಟ್ಟದ ಶಿಕ್ಷಣ ಹಾಗೂ ಆಧುನಿಕ ವ್ಯವಸ್ಥೆಯೊಂದಿಗೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಕೊಡಿಸಬಹುದು ಎಂದರು.
ಗ್ರಾಮೀಣ ಭಾಗದಲ್ಲಿ ಮಕ್ಕಳು ಹೆಚ್ಚು ಚುರುಕು ಮತ್ತು ಆತ್ಮವಿಶ್ವಾದಿಂದ ಇರುವುದನ್ನು ಗಮನಿಸಬಹುದು. ಸರ್ಕಾರಿ ಶಾಲೆಗಳ ಜೊತೆಗೆ ಸರ್ಕಾರದಿಂದ ಪ್ರತಿಷ್ಠಿತ ಶಾಲೆಗಳು, ಮೋರರ್ಜಿ ದೇಸಾಯಿ ಶಾಲೆಗಳಲ್ಲಿ ವಸತಿ ಸಹಿತ ಅಧ್ಯಯನ ಮಾಡುವ ಅವಕಾಶ ಮಕ್ಕಳಿಗಿದ್ದು, ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಈ ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಸಲಹೆ ಮಾಡಿದರು.
ಅಧ್ಯಯನ ಜೊತೆಗೆ ಕ್ರೀಡೆಗಳ ಜೊತೆ ಗಮನ ಹರಿಸಬೇಕು. ಕಡ್ಡಾಯವಾಗಿ ದೈಹಿಕ ಚಟುವಟಿಕೆಗಳಿಂದ ಮಕ್ಕಳು ಸದೃಢ ದೇಹ ಮತ್ತು ಏಕಾಗ್ರತೆಯನ್ನು ಹೊಂದಲು ಸಹಕಾರಿಯಾಗಿದೆ. ಗ್ರಾಮೀಣ ಭಾಗದ ಮಕ್ಕಳು ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಲು ತಯಾರಿ ಮಾಡಿ ಎಂದು ದೈಹಿಕ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಎಲ್ಲಾ ಗ್ರಾಮಗಳಲ್ಲಿ ಸ್ವಚ್ಚತೆ ಕಾಪಡುವ ದೃಷ್ಟಿಯಿಂದ ಗ್ರಾಮ ಪಂಚಾಯತಿಯಲ್ಲಿ ಹಸಿಕಸ, ಒಣಕಸ ವಿಲೇವಾರಿ ಮಾಡಿ ಕಸ ಹಾಕುವ ಉದ್ದೇಶದಿಂದ ಸುಮಾರು ೨೫೦ ಮನೆಗಳಿಗೆ ಕಸದ ಬುಟ್ಟಿ ವಿತರಣೆ ಮಾಡಲಾಗಿದೆ. ಎಲ್ಲ್ಲರೂ ಸ್ವಚ್ಚತೆ ಕಾಪಡಿಕೊಳ್ಳುವ ಮುಖಾಂತರ ಆರೋಗ್ಯ ರಕ್ಷಣೆ ಮಾಡಿಕೊಳ್ಳಿ ಎಂದರು.
ಶಾಲಾ ಮಕ್ಕಳಿಗೆ ಆಟದ ಪರಿಕರಗಳು ಮತ್ತು ಹಿರಿಯ ನಾಗರಿಕರಿಗೆ ೮ ಸ್ಟಿಕ್, ೧ ವಾಕರ್ ನೀಡಲಾಗಿದೆ. ಯುವ ತಂಡಗಳಿಗೆ ಕ್ರಿಕೆಟ್ ಕಿಟ್, ವಾಲಿಬಾಲ್, ಪುಟಬಾಲ್, ಬ್ಯಾಡ್ಮಿಂಟನ್, ಚೆಸ್ ಬೋರ್ಡ್, ಕೇರಂ ಬೋರ್ಡ್‌ನ್ನು ಪಂಚಾಯಿತಿ ವಿತರಿಸಲಾಗಿದೆ ಎಂದು ತಿಳಿಸಿದರು. ಗ್ರಾಮ ಪಂಚಾಯತಿ ಸದಸ್ಯ ಮೇಘರಾಜ್, ಪವಿತ್ರ, ಪ್ರಸಾದ್ ಮುಖಂಡರಾದ ಬಸವರಾಜ್, ಚೌಡಪ್ಪ ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!