ಮೇಲುಕೋಟೆಯಲ್ಲಿ ಬಾರ್ ಸೆಟ್ ನಿರ್ಮಿಸಿ ಎಡವಟ್ಟು ಮಾಡಿಕೊಂಡ ತೆಲುಗು ಚಿತ್ರತಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಲುಕೋಟೆ ಭವ್ಯಸ್ಮಾರಕ ರಾಯಗೋಪುರದಲ್ಲಿ ತೆಲುಗು ಚಿತ್ರತಂಡವೊಂದು ಬಾರ್ ಮಾದರಿ ಸೆಟ್ ನಿರ್ಮಿಸಿ ಮದ್ಯದಬಾಟಲಿಗಳನ್ನು ಜೋಡಿಸಿ ಚಿತ್ರೀಕರಣ ಮಾಡಿ ಎಡವಟ್ಟುಮಾಡಿಕೊಂಡಿದೆ. ಚಿತ್ರತಂಡದ ಈ ನಡೆಯನ್ನು ನಾಗರೀಕರು ವಿರೋಧಿಸಿದ ಕಾರಣ ದೇವಾಲಯದ ಆಡಳಿತಾಧಿಕಾರಿಗಳೂ ಆದ ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ಚಿತ್ರೀಕರಣ ಸ್ಥಗಿತಗೊಳಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಮಂಡ್ಯಜಿಲ್ಲಾಧಿಕಾರಿಗಳಿಂದ ಶನಿವಾರ ಮತ್ತು ಭಾನುವಾರ ಚಿತ್ರೀಕರಣಕ್ಕೆ ಅನುಮತಿಪಡೆದಿದ್ದ ನಾಗಚೈತನ್ಯ ನಟನೆಯ 3ನಾಟ್2 ಚಿತ್ರತಂಡ ಆದೇಶದಲ್ಲಿನ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ರಾಯಗೋಪುರದಲ್ಲಿ ಮನಬಂದಂತೆ ಕಬ್ಬಿಣದ ಕಂಬಗಳನ್ನು ಹಾಕಿ ಮದುವೆ ಸೆಟ್ ನಿರ್ಮಿಸಿ ಪಕ್ಕದಲ್ಲೇ ಬಾರ್ ಮಾದರಿ ಸೆಟ್ ನಿರ್ಮಿಸಿ ವಿವಿಧ ಬ್ರಾಂಡ್‌ಗಳ ಮಧ್ಯದ ಬಾಟಲಿಗಳನ್ನು ಸಹ ಜೋಡಿಸಿ ರಾತ್ರೀವೇಳೆ ಚಿತ್ರೀಕರಣ ಮಾಡಿತ್ತು ಚಿತ್ರೀಕರಣ ವೀಕ್ಷಿಸಿ ಅಸಮದಾನಗೊಂಡ ನಾಗರೀಕರು ರಾಜಮಹಾರಾಜರು ಭಕ್ತಿಭಾವದಿಂದ ನಿರ್ಮಿಸಿರುವ ಸಂಸ್ಕೃತಿ, ಪರಂಪರೆ ಬಿಂಬಿಸುವ ರಾಯಗೋಪುರದಂತಹ ಭವ್ಯಸ್ಮಾರಕಗಳಲ್ಲಿ ಮಧ್ಯದ ಬಾಟಲಿಗಳನ್ನಿಟ್ಟು ಮದುವೆ ಸೆಟ್ ನಿರ್ಮಿಸಿ ಸ್ಮಾರಕಗಳ ಬಳಕೆಯ ನಿಯಮಳನ್ನು ಉಲ್ಲಂಘಿಸಿ ಚಿತ್ರೀಕರಣಮಾಡುವುದು ಅಕ್ಷಮ್ಯ ಅಪರಾಧವಾಗಿದೆ. ಜೊತೆಗೆ ಶ್ರೀವೈಷ್ಣಕ್ಷೇತ್ರದ ಪಾವಿತ್ರತೆಗೆ ಭಂಗತರುವಂತೆ ಚಿತ್ರತಂಡ ನಡೆದುಕೊಂಡಿದ್ದು, ಚಿತ್ರೀಕರಣವನ್ನು ತಕ್ಷಣಸ್ಥಗಿತಗೊಳಿಸಿ ಮೇಲುಕೋಟೆ ಪರಂಪರೆಯನ್ನು ಉಳಿಸಬೇಕೆಂದು ಆಗ್ರಹಿಸಿ ಚಿತ್ರತಂಡದ ನಡೆಯವಿರುದ್ಧ ಶನಿವಾರ ರಾತ್ರಿಯೇ ಆಕ್ರೋಶವ್ಯಕ್ತಪಡಿಸಿದ್ದರು.

ಮೇಲುಕೋಟೆ ದ್ರವಕುಮಾರ್ ಮತ್ತು ನಾಗರೀಕರ ಮನವಿಗೆ ಸ್ಪಂದಿಸಿದ ಉಪವಿಭಾಗಾಧಿಕಾರಿ ಚಿತ್ರೀಕರಣವನ್ನು ತಕ್ಷಣ ನಿಲ್ಲಿಸುವಂತೆ ಸೂಚನೆ ನೀಡಿದ ಪರಿಣಾಮ ತೆಲಗುಚಿತ್ರತಂಡ ಚಿತ್ರೀಕರಣವನ್ನು ಸ್ಥಗಿತಗೊಳಿಸಿದೆ. ಭಾನುವಾರ ಮದ್ಯಾಹ್ನ ಚಿತ್ರೀಕರಣ ಸೆಟ್ ಹಾಕಿದ್ದ ಸ್ಥಳಕ್ಕೆ ತೆರಳಿದ ದೇವಾಲಯ, ಪ್ರಾಚ್ಯವಸ್ತು ಇಲಾಖೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿ, ಭಕ್ತರ ವೀಕ್ಷಣೆಗೆ ಅಡಚಣೆಯುಂಟುಮಾಡುವಂತೆ ನಿರ್ಮಿಸಿರುವ ಚಿತ್ರೀಕರಣದ ಸೆಟ್‌ನ್ನು ತಕ್ಷಣ ತೆರವುಗೊಳಿಸುವಂತೆ ಪ್ರೊಡಕ್ಷನ್ ಮ್ಯಾನೇಜರ್ ಶಾಸ್ತ್ರೀಗೆ ಸೂಚನೆ ನೀಡಿದ್ದಾರೆ.

ಕಳೆದ 2021ರ ನವೆಂಬರ್ ಮಾಹೆಯಲ್ಲಿ ನಡೆದ ರಾಜಮುಡಿಯ ಅಷ್ಠತೀರ್ಥೋತ್ಸವ ದಿನ ಕಲ್ಯಾಣಿಯಲ್ಲಿ ಸೆಟ್ ಹಾಕಿದ್ದ ನಾಗಚೈತನ್ಯ ನಟನೆಯ ಚಿತ್ರತಂಡ ಚೆಲುವನಾರಾಯಣಸ್ವಾಮಿವರ ವಜ್ರಖಚಿತ ರಾಜಮುಡಿ ಉತ್ಸವಕ್ಕೆ ಅಡಚಣೆಯುಂಟುಮಾಡಿತ್ತು, ಕಲ್ಯಾಣಿ ಸಮುಚ್ಚಯದ ಒಳಭಾಗಕ್ಕೆ ಚಿತ್ರೀಕರಣಕ್ಕೆ ಬಳಸಲು ಭಾರಿಗಾತ್ರದ ಕ್ರೇನ್ ತಂದಾಗ ಅದು ಹೂತುಹೋಗಿ ಅವಾಂತರ ಸೃಷ್ಟಿಮಾಡಿತ್ತು. ಈ ಘಟನೆಯ ನಂತರ 6 ತಿಂಗಳಕಾಲ ಮೇಲುಕೋಟೆಯಲ್ಲಿ ಚಿತ್ರೀಕರಣ ನಿಷೇಧಮಾಡಲಾಗಿತ್ತು.

ಪ್ರವಾಸಿಗರ ಅಸಮದಾನ :
ರಾಯಗೋಪುರದ ಮಧ್ಯಭಾಗದಲ್ಲೇ ಮದುವೆ ಸೆಟ್ ಹಾಕಿ ವಿದ್ಯುತ್ ಅಲಂಕಾರಮಾಡಲು ಬೃಹತ್ ಕಬ್ಬಿಣಕಂಬಗಳನ್ನು ಅಳವಡಿಸಿದ್ದ ಕಾರಣ ಭಾನುವಾರ ಸ್ಮಾರಕ ರಾಯಗೋಪುರ ವೀಕ್ಷಣೆಗೆ ಬಂದ ಸಾವಿರಾರು ಪ್ರವಾಸಿಗರಿಗೆ ತೊಂದರೆಯಾಯಿತು. ಚಿತ್ರತಂಡದ ಈ ಮಾದರಿಯ ವರ್ತನೆಯ ಬಗ್ಗೆ ಭಕ್ತರು ತೀವ್ರಸಮದಾನ ವ್ಯಕ್ತಪಡಿಸಿ ಚಿತ್ರತಂಡಗಳ ಸ್ಮಾರಕಗಳ ದುರ್ಭಳಕೆಯನ್ನು ಸಂಬಂಧಿಸಿದ ಅಧಿಕಾರಿಗಳು ತಡೆಗಟ್ಟಬೇಕು ಎಂದು ಮನವಿ ಮಾಡಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!