ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿಬಿದ್ದ ಮಹಿಳಾ ಅಬಕಾರಿ ಉಪ ನಿರೀಕ್ಷಕ

ಹೊಸದಿಗಂತ ವರದಿ, ಅಂಕೋಲಾ:

ಅಕ್ರಮ ಸರಾಯಿ ಸಾಗಾಟಕ್ಕೆ ಸಂಬಂಧಿಸಿದ ಪ್ರಕರಣವೊಂದರ ಆರೋಪಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ಪ್ರೊಬೆಶನರಿ ಮಹಿಳಾ ಅಬಕಾರಿ ಉಪ ನಿರೀಕ್ಷಕರೊಬ್ಬರು ಜಾಗೃತದಳದ ಬಲೆಗೆ ಬಿದ್ದ ಘಟನೆ ಅಂಕೋಲಾದಲ್ಲಿ ನಡೆದಿದೆ.
ಫೆಬ್ರವರಿ 26 ರಂದು ಅಂಕೋಲಾ ಹಾರವಾಡ ರೈಲ್ವೆ ಸೇತುವೆ ಬಳಿ ಅಂಕೋಲಾ ಮತ್ತು ಕಾರವಾರದ ಅಬಕಾರಿ ಅಧಿಕಾರಿಗಳ ತಂಡ ದಾಳಿ ನಡೆಸಿ ಎರಡು ಪ್ರತ್ಯೇಕ ದ್ವಿಚಕ್ರ ವಾಹನಗಳಲ್ಲಿ ಸಾಗಿಸಲಾಗುತ್ತಿದ್ದ ಗೋವಾ ರಾಜ್ಯದಲ್ಲಿ ತಯಾರಾದ ಮದ್ಯ ಮತ್ತು ಎರಡು ದ್ವಿಚಕ್ರ ವಾಹನಗನ್ನು ವಶಪಡಿಸಿಕೊಂಡು ಕಾರವಾರ ವಿವೇಕಾನಂದ ನಗರ ನಿವಾಸಿ ಮುಶ್ತಾಕ್ ಹುಸೇನ್ ಮತ್ತು ತಾರಿವಾಡಾದ ಪ್ರವೀಣ ರಾಜನ್ ಎನ್ನುವವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಇದೇ ಪ್ರಕರಣದ ಆರೋಪಿತ ಮುಶ್ತಾಕ್ ಹುಸೇನ್ ಬಳಿ ಅಬಕಾರಿ ಉಪ ನಿರೀಕ್ಷಕಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು ಅವರು ಕಾರವಾರ ಎ.ಸಿ.ಬಿ ಗೆ ದೂರು ಸಲ್ಲಿಸಿದ್ದರು.
ದೂರಿನನ್ವಯ ಕಾರ್ಯಾಚರಣೆ ನಡೆಸಿದ ಎ.ಸಿ.ಬಿ ತಂಡ ಅಬಕಾರಿ ಇಲಾಖೆಯ ಅಂಕೋಲಾ ಕಚೇರಿಯ ಪ್ರೊಬೆಶನರಿ ಉಪ ನಿರೀಕ್ಷಕಿ ಪ್ರೀತಿ ಅವರು 20 ಸಾವಿರ ಹಣ ಲಂಚವಾಗಿ ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆದು ಕೊಂಡಿದ್ದಾರೆ.
ಎ.ಸಿ.ಬಿ ಡಿ.ವೈ.ಎಸ್.ಪಿ ಪ್ರಕಾಶ ಸೇರಿದಂತೆ 6 ಜನ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಅಧಿಕಾರಿಯ ವಿಚಾರಣೆ ಮುಂದುವರೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!