ಕಾಂಗ್ರೆಸ್ಸಿಗೆ ಕಾಡುತ್ತಿದೆ ಮಾರ್ಗರೇಟ್ ಆಳ್ವ ಅವರ ಹಳೆಯ ಸಂದರ್ಶನವೊಂದರ ವಿಡಿಯೊ ತುಣುಕು!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ದೇಶದ ಉಪರಾಷ್ಟ್ರಪತಿ ಹುದ್ದೆಗೆ ತನ್ನ ಕಡೆಯ ಅಭ್ಯರ್ಥಿಯನ್ನಾಗಿ ಮಾರ್ಗರೇಟ್ ಆಳ್ವ ಅವರ ಹೆಸರನ್ನು ಕಾಂಗ್ರೆಸ್ ಘೋಷಿಸುತ್ತಲೇ, ಅವರು ಈ ಹಿಂದೆ ನೀಡಿದ್ದ ಸಂದರ್ಶನವೊಂದು ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್ಸಿಗೆ ಹಾಗೂ ಮುಖ್ಯವಾಗಿ ಸೋನಿಯಾ ಪರಿವಾರಕ್ಕೆ ಮುಜುಗರವಾಗುವಂಥ ವಿಷಯಗಳು ಈ ಸಂದರ್ಶನದಲ್ಲಿ ಪ್ರಸ್ತಾಪವಾಗಿದ್ದವು.
ಕಾಂಗ್ರೆಸ್ ಪಕ್ಷವು ಮಾಜಿ ಪ್ರಧಾನಿ ಪಿ ವಿ ನರಸಿಂಹರಾವ್ ಅವರನ್ನು ನಿಧನಾನಂತರ ನಡೆಸಿಕೊಂಡ ರೀತಿಯನ್ನು ಮಾರ್ಗರೇಟ್ ಆಳ್ವ ಟೀಕಿಸಿದ್ದರು. ಇದನ್ನು ಮೂಲತಃ ಅವರ ಜೀವನಗಾಥೆಯಲ್ಲಿ ಹಂಚಿಕೊಂಡಿದ್ದರು. ಆ ಪುಸ್ತಕದ ಬಗ್ಗೆ ಸಂದರ್ಶನದಲ್ಲಿ ಕರಣ್ ಥಾಪರ್ ಪ್ರಶ್ನಿಸಿದ್ದರು. ಆಗಲೂ ತಮ್ಮ ನಿಲುವನ್ನು ಸಂರ್ಥಿಸಿಕೊಂಡಿದ್ದ ಮಾರ್ಗರೇಟ್ ಆಳ್ವ ಅವರು, ಪಿ ವಿ ನರಸಿಂಹ ರಾವ್ ಅವರ ಪಾರ್ಥಿವ ಶರೀರವನ್ನು ದೆಹಲಿಯ ಕಾಂಗ್ರೆಸ್ ಕಚೇರಿ ಒಳಗೆ ತರುವುದಕ್ಕೇ ಬಿಡಲಿಲ್ಲ. ಇದು ಅತ್ಯಂತ ಖೇದದ ಸಂಗತಿ. ಅವರ ಬಗ್ಗೆ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳೇನೇ ಇದ್ದರೂ ಒಬ್ಬ ಮಾಜಿ ಪ್ರಧಾನಿಯನ್ನು ತಮ್ಮ ಪಕ್ಷ ನಡೆಸಿಕೊಂಡ ರೀತಿ ತಮಗೆ ಎಂದೂ ಸಮ್ಮತವಲ್ಲ ಎಂದಿದ್ದರು ಮಾರ್ಗರೇಟ್ ಆಳ್ವ.

 

ನೀವೀ ವಿಷಯವನ್ನು ಆಗಿನ ಅಧ್ಯಕ್ಷೆ ಹಾಗೂ ನಿಮಗೆ ಆಪ್ತರಾಗಿದ್ದ ಸೋನಿಯಾ ಗಾಂಧಿ ಬಳಿ ಚರ್ಚಿಸಲಿಲ್ಲವೇ ಎಂಬ ಪ್ರಶ್ನೆಗೆ ಆಳ್ವ ಆಗ ಉತ್ತರಿಸಿದ್ದು- “ಸೋನಿಯಾರ ಬಳಿ ನಾನು ಆ ವಿಷಯ ಚರ್ಚಿಸಲಿಲ್ಲ. ನನಗೆ ತುಂಬ ನೋವಾಗಿತ್ತು. ಆದರೆ ಪಕ್ಷದ ಸಹೋದ್ಯೋಗಿಗಳ ಬಳಿ ಈ ಬಗ್ಗೆ ಆಕ್ಷೇಪ ತೋಡಿಕೊಂಡಿದ್ದೆ”. ಕಾಂಗ್ರೆಸ್ ಕಚೇರಿಯಲ್ಲಿ ಪಿ ವಿ ನರಸಿಂಹ ರಾವ್ ಅವರ ಫೋಟೊ ಇಡದೇ ಇದ್ದದ್ದೂ ಸರಿಯಾದ ಕ್ರಮವಲ್ಲ ಎಂದು ಮಾರ್ಗರೇಟ್ ಆಳ್ವ ತಮ್ಮ ಹಳೆಯ ಸಂದರ್ಶನದಲ್ಲಿ ಹೇಳಿದ್ದರು.
ಉತ್ತರ ಕನ್ನಡ (ಕೆನರಾ)ವನ್ನು ಈ ಹಿಂದೆ ಸಂಸದೆಯಾಗಿ ಪ್ರತಿನಿಧಿಸಿದ್ದ ಆಳ್ವ ಮಾತುಗಳು ಪರೋಕ್ಷವಾಗಿ ಸೋನಿಯಾ ಕುಟುಂಬವನ್ನೇ ಕಟಕಟೆಯಲ್ಲಿ ನಿಲ್ಲಿಸುತ್ತವೆ. ತಮ್ಮ ಕುಟುಂಬಕ್ಕೆ ಹೊರತಾದ ಪಿ ವಿ ನರಸಿಂಹರಾವ್ ಅವರ ನೆನಪುಗಳನ್ನು ಕಾಂಗ್ರೆಸ್ ಕಾಪಾಡದಂತೆ ಆ ಪರಿವಾರ ನೋಡಿಕೊಂಡಿತು ಎಂಬ ವಾದಗಳು ಜನರ ನಡುವಿನ ಚರ್ಚೆಗಳಲ್ಲಿ ಇಂದಿಗೂ ಜೀವಂತ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!