ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜಡಿಮಳೆ, ಕೆಸರು ಗದ್ದೆ, ಒದ್ದೆ ಪಾಠಿ ಚೀಲ, ನೀಲಿ ಕೊಪ್ಪೆ ಮತ್ತು ಅದೊಂದು ಶನಿವಾರ!

  • ಕಾವ್ಯಾ ಜಕ್ಕೊಳ್ಳಿ

ಅವತ್ತು ಮಳೆಗಾಲದ ಶನಿವಾರ, ಮೃಗಶಿರ ಮುಗಿದು ಆರಿದ್ರಾ ಮೆಟ್ಟಿತ್ತು. ಭೂರಮೆಯ ದಾಹಕ್ಕೆ ತನ್ನನ್ನೇ ಹವಿಸ್ಸಿನ ರೂಪದಲ್ಲಿ ಪೂರ್ಣಾಹುತಿ ಕೊಟ್ಟುಕೊಳ್ಳುತ್ತಿದೆಯೇನೋ ಎಂಬಂತೆ ಒಂದೇ ಸಮನೆ ಮಳೆ. ಅಂಗಳದ ತುದಿಯಲ್ಲಿ ಆಯಿ ನೆಟ್ಟ ಢೇರೆ ಗಿಡದ ಸಾಲಿನಿಂದ ಸಾವಿರಾರು ಸಣ್ಣ ರೆಕ್ಕೆಯ ಹಾತೆ ಹುಳಗಳೆದ್ದು ಗಿರಕಿ ಹೊಡೆಯುತ್ತಿದ್ದವು.

ಚೌಡಿ ಮನೆ ಬಾವಿಯ ದಿಕ್ಕಿನಲ್ಲಿ ಕಪ್ಪೆಗಳ ಒಟಗುಡುವಿಕೆ ಜೋರಾಗಿತ್ತು. ತೆಂಗಿನ ಮರಕ್ಕಂಟಿ ಕುಳಿತ ಕರೀ ಜಿರಲೆಗಳು ಕಿವಿಗೆ ಹತ್ತಿ ಸೊಳೆ ಗಿಡಿದುಕೊಳ್ಳಬೇಕೆನ್ನುವಷ್ಟು ಕಿರುಚುತ್ತಿದ್ದವು. ಇಡೀ ಮೈಯನ್ನು ಕೆಂಪಗಾಗಿಸುವ ಸೊಳ್ಳೆಗಳ ಕುಂಯ್ಗುಡುತ್ತಿದ್ದವು. ಜಗುಲಿಯಲ್ಲಿದ್ದವರಿಗೆ ಒಳಜಗುಲಿಯಲ್ಲಿದ್ದವರ ಮಾತೇ ಕೇಳಿಸದಷ್ಟು ಆರ್ಭಟದಲ್ಲಿ ಸಾಗುತ್ತಿರುವ ಏಕತಾನತೆ ಆವರಿಸಿ, ‘ಹಾಳು ಮಳೆ’ ಎಂದು ಶಪಿಸಬೇಕೆನಿಸುತ್ತಿತ್ತು.

ಮಳೆಯ ಆರ್ದೃ ಮಾರುತಕ್ಕೆ ಮುದುಡಿಕೊಂಡು ಕಿಟಕಿಯಿಂದಲೇ ಗದ್ದೆಯ ಕಡೆ ನೋಟ ಹಾಯಿಸಿದ ಅಜ್ಜನಿಂದ ಆದೇಶ ಬಂದೇ ಬಿಡ್ತು. ‘ಮಾಣಿ ಗದ್ದೆಲ್ಲಿ ಛೋಲೋ ನೀರ್ ನಿಂತ್ತಿದ್ದು, ಇನ್ನು ಗದ್ದೆ ಕೆಲಸ ಶುರು ಮಾಡಲಡ್ಡಿಲ್ಲೆ. ಆಳ್ಗಕ್ಕೆ ನಾಳೆನೆ ಬಪ್ಪಲ್ಹೇಳು’

ಬೆಲ್ಲ-ತುಪ್ಪದ ಜೊತೆ ಗರಿಗರಿ ತೆಳ್ಳವು ತಿನ್ನುತ್ತಿದ ನನಗೆ ಮತ್ತು ಪಕ್ಕಕ್ಕೆ ಕುಳಿತ ಅಕ್ಕನಿಗೆ ಕಿವಿ ನೆಟ್ಟಗಾಯ್ತು. ಕಣ್ಸನ್ನೆಯಲ್ಲೇ ಡಿಸೈಡ್ ಮಾಡಿಕೊಂಡೆವು ‘ಇವತ್ತು ಅಜ್ಜಿ ಮನೆ ದಾರಿಯಲ್ಲಿ ಅಲ್ಲ, ಗದ್ದೆ ದಾರಿಯಲ್ಲಿಯೇ ಶಾಲೆಗೆ ಹೋಗಬೇಕೆಂದು’

ಬೇಗ-ಬೇಗ ಆರೇಳು ತೆಳ್ಳವ್ವು ತಿಂದು ಶನಿವಾರ 9 ಗಂಟೆಗೆ ಪ್ರಾರಂಭವಾಗುವ ಶಾಲೆಗೆ 8 ಗಂಟೆಗೆ ಹೊರಟೆವು. ಅಜ್ಜ ಹೋದ್ವರ್ಷ ಮಾಡಿಕೊಟ್ಟಿದ್ದ ನೀಲಿ ಪ್ಲಾಸ್ಟಿಕ್ ಕೊಪ್ಪೆ ಹಾಕಿಕೊಂಡು, ಹೆಗಲ ಮೇಲೆ ಪಾಠಿಚೀಲ ನೀತಾಕಿಕೊಂಡು, ಗಿಡ್ಡಾಗಿದ್ದ ನೀಲಿ ಸ್ಕರ್ಟ್ ಎಳೆದುಕೊಳ್ಳುತ್ತ ವೀರ ವನಿತೆಯರಂತೆ ಗದ್ದೆ ದಾರಿಯಲ್ಲಿಯೇ ಶಾಲೆಗೆ ಹೊರಟೆವು.

ಎಕರೆಗಳ ಗದ್ದೆ ನೀರು ನಿಂತು ಸಮುದ್ರದಂತಾಗಿತ್ತು. ಚಿಮಣಿ ಹಿಡಿದು ಹುಡುಕಿದರೂ ದಾರಿಗಳು ಕಾಣುತ್ತಲಿರಲಿಲ್ಲ. ಗದ್ದೆಯ ಒಂದು ಪಕ್ಕ ಹರಿಯುವ ಹಳ್ಳದ ನಿರಂತ ಅಘೋಷ. ತನ್ನ ಕೆಲಸವೇ ಎಂಬಂತೆ ವರುಣ ನಿಲ್ಲಿಸದೇ ಅಭ್ಯಂಜನ ಮಾಡುತ್ತಲೇ ಇದ್ದ. ಆಗಾಗ ರಾಯಭಾರಿಯಂತೆ ಗಾಳಿಯೂ ಬಂದು ಹೋಗುತ್ತಿತ್ತು.

ಇದ್ಯಾವುದು ತಕ್ಷಣಕ್ಕೆ ನಿಲ್ಲುವಂತೆ ಕಾಣಲಿಲ್ಲ. ನಾನೇ ಮುಂದಾಗಿ ಗದ್ದೆಗೆ ಇಳಿದೆ. ಇಳಿಯುತ್ತಿದ್ದಂತೆಯೇ ದೊಡ್ಡಪ್ಪ ಎರಡು ದಿನದ ದಿಂದಷ್ಟೆ ತಂದಿದ್ದ ಚಪ್ಪಲ್ಲು ಮಣ್ಣಿನಲ್ಲಿಯೇ ಹೂತು ಬಿಟ್ಟಿತು. ಪಾಠಿ ಚೀಲ, ಕೊಪ್ಪೆ ಪಕ್ಕಕ್ಕಿಟ್ಟು ಚಪ್ಪಲಿ ಹುಡುಕುವ ನೆಪ ಮಾಡಿಕೊಂಡು ನಾನು, ಅಕ್ಕ ನೀರಿಗಿಳಿದೆವು.

ನೀರಿಗಿಳಿದವರಿಗೆ ಚಪ್ಪಲ್ಲಿ ಸಿಕ್ಕಿದರೂ ನೀರು ಬಿಟ್ಟು ಮೇಲಕ್ಕೆ ಬರುವ ಮನಸ್ಸಾಗಲಿಲ್ಲ. ನೀರಿಂದ ಮೇಲಕ್ಕೆದ್ದರೆ ಕೆಳ ತುಟಿಯಿಂದ ಸಣ್ಣ ಕರುಳಿನವರೆಗೂ ಕಟಕಟ ಎನ್ನುವಂತಹ ನಡುಕ. ಶಾಲೆಯ ಸಮವಸ್ತ್ರ ಎಂಬುದನ್ನೂ ಮರೆತು ಕೆಸರು ನೀರಲ್ಲೆ ಕುಳಿತೆವು.

ಗದ್ದೆ ಅಂಚುಗಳಲ್ಲಿದ್ದ ಸಣ್ಣ-ಪುಟ್ಟ ಏಡಿ ಡೊಂಬಕ್ಕೆ ಕೈ ಹಾಕಿ, ನಾಮುಂದೆ, ತಾಮುಂದೆ ಎಂಬಂತೆ ಏಡಿ ಹಿಡಿದು ಅವುಗಳ ಕಾಲೆಲ್ಲ ಮುರಿದೆವು ನೀರೊಳಗೆ ಮುಳುಗಿಸಿದೆವು. ಬಾಲದ ಮೀನುಗಳನ್ನು ಸಾಕಬೇಕೆಂದು ಕಷ್ಟಪಟ್ಟು ಹಿಡಿದು ನೀರಿನ ಬಾಟಲಿ ತುಂಬಿಕೊಂಡೆವು. ಕಚ್ಚಾ ಪಟ್ಟಿಯ ಹಾಳೆಗಳನ್ನು ಹರಿದು ಹತ್ತಾರು ಕಾಗದದ ದೋಣಿ ಬಿಟ್ಟು ಚಪ್ಪಾಳೆ ತಟ್ಟಿದೆವು. ನಮ್ಮಿಬ್ಬರಲ್ಲಿಯೇ ಕೆಸರು ಗದ್ದೆಯ ಓಟದ ಸ್ಪರ್ಧೆ, ಕಬ್ಬಡ್ಡಿ. ಬಾಯಾರಿಕೆ ತಡೆಯಲಾಗದೇ ಅದೇ ಕೊಳಕು ನೀರನ್ನೇ ಕುಡಿದೆವು. ಅದೇ ನೀರಲ್ಲೆ ಕೈ, ಕಾಲು ಬಡಿಯುತ್ತಾ ಈಜಿದೆವು.

ಆಟ ಆಡಿ ಸುಸ್ತಾಗಿ ಅಲ್ಲೆ ಒಂದು ಕೋಳಿ ನಿದ್ದೆ ಕೂಡ ಮಾಡಿದೆವು. ಮಳೆಯ ಹನಿಗಳನ್ನು ಬೊಗಸೆಯಲ್ಲಿ ತುಂಬಿಕೊಂಡು ಆಕಾಶಕ್ಕೆ ತೂರುತ್ತಾ ಖೇಖೇ ಹಾಕಿ ಕುಣಿದೆವು. ಹಸಿವು, ದಣಿವಿನ ಅರಿವಿಲ್ಲದೆ, ಶಾಲೆಗೆ ಹೋಗುವ ನೆನಪಿಲ್ಲದೆ ಮಧ್ಯಾಹ್ನದ ತನಕ ಗದ್ದೆಯಲ್ಲಿ ಆಟವಾಡಿದ್ದೇ ಆಡಿದ್ದು. ಊರಿನ ತೋಟಗಳಿಗೆ ಮಂಗ ಬರದಂತೆ ಕಾಯುವ ನಾಗ್ಯಾ ಬಂದು ಗದರದಿದ್ದರೆ ಇನ್ನೂ ಎಷ್ಟು ಹೊತ್ತು ಅಲ್ಲೆ ಇರುತ್ತಿದ್ದೇವೊ ಏನೋ!

ಕೆಸರಾದ ಬಟ್ಟೆ, ಒದ್ದೆಯಾದ ಪಾಠಿಚೀಲ ಹಾಕಿಕೊಂಡು, ಕೊಪ್ಪೆ ಹಿಡಿದು ಮನೆಯತ್ತ ಕಾಲು ಕಿತ್ತೆವು. ಯಾಕೋ ಅಜ್ಜ ನಮ್ಮಿಬ್ಬರಿಗಾಗಿಯೇ ಕಾಯುತ್ತ ಕುಳಿತಿದ್ದಂತಿತ್ತು. ‘ಯಾಕೆ ಇಷ್ಟು ತಡ? ಮೈಯೆಲ್ಲ ಕೆಸರಾಗಿದ್ದೇಂತಕ್ಕೆ’ ಎಂದು ಅಜ್ಜ ಪ್ರಶ್ನೇ ಮಾಡುತ್ತಿದ್ದರೆ, ‘ಇವತ್ತು ಸರ್ ಲೇಟ್ ಆಗಿ ಬಿಟ್ರು, ಕಾಲ್ಜಾರಿ ಗದ್ದೆಲ್ಲಿ ಇಬ್ಬರು ಬಿದ್ಯ. ಮೈ ಪೂರ್ತಿ ಕೆಸರಾತು’ ಎಂದು ಅಕ್ಕ ಸರಕ್ಕನೇ ಉತ್ತರಿಸಿದಳು. ನಾನು ಹೌದೆಂಬಂತೆ ತೆಲೆ ಆಡಿಸಿದೆ.

ಅಜ್ಜ ಯಾಕೋ ನಮ್ಮ ಹಸಿ ಸುಳ್ಳನ್ನು ನಂಬಿದಂತೆ ಕಾಣಲಿಲ್ಲ. ಅಜ್ಜನ ಮುಖ ನೋಡಲು ಧೈರ್ಯ ಸಾಲದೇ ಪಕ್ಕಕ್ಕೆ ತಿರುಗಿದೆವು. ಕಟ್ಟೆಯ ತುದಿಯಲ್ಲಿ ಸರ್ ಕುಳಿತು ಕವಳ ಹಾಕುತ್ತ ನಮ್ಮೆಡೆಗೆ ನೋಡಿ ವ್ಯಂಗ್ಯವಾಗಿ ನಕ್ಕಿದರು. ಇನ್ನು ಅಜ್ಜನ ಬೆತ್ತಕ್ಕೆ ಶರಣಾಗದೆ ಬೇರೆ ದಾರಿಯೇ ಇರಲಿಲ್ಲ.

ಆಗಲೇ ಸರ್ ಮನೆಗೆ ಬಂದು ನಾವು ಶಾಲೆಗೆ ಬಂದಿಲ್ಲ ಎಂದು ಕಂಪ್ಲೆಂಟ್ ಮಾಡಿದ್ದಾಗಿತ್ತು. ಇಬ್ಬರಿಗೂ ಸುಳ್ಳು ಹೇಳಿದ್ದಕ್ಕೆ ಸರ್ ಎದುರೇ ಅಜ್ಜ ಬಾಸುಂಡೆ ಬರುವಂತೆ ಹೊಡೆದ. ಕಿವಿ ಹಿಂಡಿ ಕೆಂಪಗಾಗಿಸಿದ. ಬೆಳಗಿನಿಂದ ಒಂದೇ ಸಮನೆ ಸುರಿಯುತ್ತಿದ್ದ ಮಳೆ ಪಕ್ಕನೆ ನಿಂತಿತು. ಮಳೆಯೂ ನಮ್ಮನ್ನು ಅಣುಕಿಸಿದಂತಾಯಿತು. ಇಬ್ಬರ ಕಣ್ಣುಗಳಲ್ಲೂ ಗಂಗೆ ಭೋರ್ಗರೆದಳು. ಸರ್ ಎದುರು 50 ಬಸ್ಕಿ ಹೊಡೆದು ಕ್ಷಮೆ ಕೇಳಿದೆವು.

ಮಳೆಗಾಲ ಆರಂಭವಾದಗಲೆಲ್ಲ ಇದೊಂದು ಘಟನೆ ನೆನಪಾಗಿ ಒಬ್ಬಳೆ ನಗುವಂತಾಗುತ್ತದೆ. ಮತ್ತೊಮ್ಮೆ ಸಿಗಲಿ ಅದೇ ಬಾಲ್ಯ, ಅಂಥದ್ದೇ ಚಳಿ ಮಳೆಗಾಲ, ಅಜ್ಜನ ಬೆತ್ತದ ಬಿಸಿ ಎನಿಸುತ್ತದೆ. ಮಳೆಗಾಲದಲ್ಲಿ ಒದ್ದೆಯಾದ ಈ ನೆನಪು ಎದೆಯಲ್ಲಾ ಹಸಿರಾಗಿಸಿ ಮಳೆಗಾಲದಲ್ಲಿ ಬೆಚ್ಚಗಿನ ಅನುಭವ ನೀಡುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss