ಹೊಸ ದಿಗಂತ ವರದಿ, ರಾಮನಗರ:
ವೈಜ್ಞಾನಿಕವಾಗಿ ನಾವು ಅದೆಷ್ಟೇ ಮುಂದುವರಿದಿದ್ದರೂ ಕೆಲವೊಂದಿಷ್ಟಕ್ಕೆ ಮಾತ್ರ ಇಂದಿಗೂ ಉತ್ತರ ಸಿಕ್ಕೇ ಇಲ್ಲ. ಗಂಡ, ಮಗು ಎಂದುಕೊಂಡು ಸುಖ ಸಂಸಾರ ಬಾಳುತ್ತಿದ್ದ ಆ ಮಹಿಳೆಗೂ ಆ ಕರೆಗೆ ಕಾರಣವೇ ಗೊತ್ತಿರಲಿಲ್ಲ. ಯಾರು ಕರೆಯುತ್ತಿದ್ದಾರೆ, ಏನಾಗುತ್ತಿದೆ ಎನ್ನುವುದನ್ನೂ ಅರಿಯದ ಮಹಿಳೆ ಇದೀಗ ನೆನಪಾಗಿ ಮಾತ್ರ ಉಳಿದಿದ್ದಾಳೆ.
ಕಾರಣವೇ ಇಲ್ಲದೆ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕು, ಮೂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಾದರಿ ರೈತ ಎಂತೆನಿಸಿಕೊಂಡಿರುವ ಅಶೋಕ್, ಆತನ ಹೆಂಡತಿ ಮಾಲ (26) ಮತ್ತು ಒಂದೂವರೆ ವರ್ಷದ ಮಗು ಗ್ರಾಮದ ಹೊರಗೆ ಮನೆ ಮಾಡಿಕೊಂಡು ಸುಖ ಸಂಸಾರ ನಡೆಸುತ್ತಿತ್ತು. ಕೆಲ ತಿಂಗಳ ಹಿಂದೆ ಮಾಲಾಳ ಅಜ್ಜ ಅಜ್ಜಿಗೆ ಹುಷಾರಿಲ್ಲವೆಂದು ಆಕೆ ಅವರ ಊರಿಗೆ ಹೋಗಿ ಬಂದಿದ್ದಳಂತೆ.
ಅದಾದ ಮೇಲೆ ಆಕೆಯ ಆರೋಗ್ಯ ಆಗಾಗಾ ಹದಗೆಡುತ್ತಿತ್ತಂತೆ. ಆದರೆ ಅದು ಮುಂದೊಂದು ದಿನ ಆಕೆಯ ಸಾವಿಗೇ ಕಾರಣವಾಗಿಬಿಟ್ಟಿದೆ. ಇತ್ತೀಚೆಗೆ ನನ್ನನ್ನು ಯಾರೋ ಕರೆದಂಗಾಗುತ್ತಿದೆ, ನನಗೆ ಅರಿವಾಗದಂತೆ ನನ್ನ ಪ್ರಾಣ ಕಳೆದುಕೊಳ್ಳಬೇಕು ಎಂತೆನಿಸುತ್ತಿದೆ ಎಂದು ಮಾಲ, ಅಶೋಕ್ ಮತ್ತು ಆಕೆಯ ತಂದೆಯ ಬಳಿ ಹೇಳುತ್ತಿರುತ್ತಿದ್ದಳಂತೆ. ಸುಮ್ಮನೆ ಯೋಚಿಸುತ್ತ ಕೂರಬೇಡ ಎಂದು ಎಲ್ಲರು ಬುದ್ಧಿ ಹೇಳಿದ್ದಾರೆ. ಆದರೆ ಮಾರ್ಚ್ 12ರಂದು ಆಕೆಯ ಬುದ್ಧಿ ಬೇರೆಯದ್ದೇ ಮಟ್ಟಕ್ಕೆ ಹೋಗಿದೆ. ಮಗುವಿನೊಂದಿಗೆ ಮಹಡಿಯಲ್ಲಿ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ ಆಕೆ ಇದ್ದಕ್ಕಿದ್ದಂತೆ ಕೆಳಗೆ ಬಂದಿದ್ದಾಳೆ. ಮನೆಯ ಹೊರಭಾಗದಲ್ಲಿ ಇಟ್ಟಿದ್ದ ಸಸ್ಯಗಳಿಗೆ ಸಿಂಪಡಿಸುವ ರಾಸಾಯನಿಕವನ್ನು ಕುಡಿದುಬಿಟ್ಟಿದ್ದಾಳೆ. ಆಕೆ ರಾಸಾಯನಿಕಕ್ಕಾಗಿ ಹುಡುಕಾಡಿ, ಅದನ್ನು ಸೇವಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದಾದ ನಂತರ ಗಂಡ ಮತ್ತು ಅಪ್ಪನಿಗೆ ಕರೆ ಮಾಡಿ ನನಗೆ ಗೊತ್ತಾಗದೇ ನಾನು ರಾಸಾಯನಿಕ ಕುಡಿದುಬಿಟ್ಟೆ, ನನ್ನನ್ನು ಕಾಪಾಡಿ ಎಂದು ಕರೆ ಮಾಡಿ ತಿಳಿಸಿದ್ದಾಳೆ.
ತಕ್ಷಣ ಮನಗೆ ಬಂದ ಅಶೋಕ್ ಆಕೆಯನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ. ಮಾಲಾಳ ಸಾವಿಗೆ ಮಾನಸಿಕ ಖಿನ್ನತೆ ಕಾರಣವೋ ಅಥವಾ ಭೂತ ಚೇಷ್ಟೆಯೋ ಎನ್ನುವುದು ಎಲ್ಲರ ಪ್ರಶ್ನೆಯಾಗಿ ಉಳಿದುಕೊಂಡಿದೆ.