ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಪಾಲಕ್ಕಾಡ್ ಬಳಿಯ ಆಯಿಲೂರ್ ಎಂಬ ಹಳ್ಳಿಯಲ್ಲಿ ಒಂದು ರೋಚಕ ಕಥೆಯಿದೆ. ಇದು ವರುಷಗಳ ಕಾಲ ಯಾರಿಗೂ ತಿಳಿಯದಂತೆ ಜನರ ನಡುವೆ ವಾಸಿಸುವ ಯುವ ದಂಪತಿಗಳ ಕಥೆ.
ಫೆಬ್ರವರಿ 2010ರಲ್ಲಿ ಇಲ್ಲಿ 34 ವರ್ಷದ ರಹಮಾನ್ 28 ವರ್ಷದ ಸಜಿತಾಳನ್ನು ಪ್ರೀತಿಸಿದ್ದ. ಆದರೆ ಇವರ ಪ್ರೀತಿಗೆ ಪೋಷಕರ ವಿರೋಧ ವ್ಯಕ್ತವಾಗಿದ್ದರಿಂದ ಸಜಿತಾ ಮನೆ ಬಿಟ್ಟು ಬಂದಿದ್ದಳು. ಈ ವೇಳೆ ಅವಳನ್ನು ಎಲ್ಲಿಗೆ ಕರೆದುಕೊಂಡು ಹೋಗಬೇಕು ಎಂದು ತಿಳಿಯದ ರಹಮಾನ್ ಆಕೆಯನ್ನು ತನ್ನ ಕೋಣೆಯಲ್ಲೇ ಅಡಗಿಸಿಟ್ಟಿದ್ದಾನೆ. ಅದು ಕೇವಲ ಒಂದಲ್ಲ ಎರಡಲ್ಲ ಬರೋಬ್ಬರಿ 10 ವರ್ಷಗಳ ಕಾಲ.
ಹೌದು, ಆತ ನಿತ್ಯವೂ ಕೋಣೆಗೆ ಹೊರಗೆ ಮತ್ತು ಒಳಗಿನಿಂದ ಲಾಕ್ ಮಾಡುತ್ತಿದ್ದ. ಅದರಿಂದ ಯಾರು ಆತನ ಕೋಣೆಗೆ ಬರುತ್ತಿರಲಿಲ್ಲ. ಇನ್ನು ಸಜಿತಾ ನಿತ್ಯಕರ್ಮಗಳಿಗಾಗಿ ರಾತ್ರಿ ವೇಳೆ ಮಾತ್ರ ಹೊರಬರುತ್ತಿದ್ದಳು. ಮೂರು ತಿಂಗಳ ಹಿಂದೆ ರಹಮಾನ್ ತನ್ನ ಮನೆಯಿಂದ ನಾಪತ್ತೆಯಾಗಿದ್ದ. ಕಳೆದ ಮಂಗಳವಾರ ಅವರ ಸಹೋದರ ಅವನನ್ನು ಗುರುತಿಸಿದಾಗ ಇಡೀ ವಿಷಯ ಬೆಳಕಿಗೆ ಬಂದಿದೆ.
ಪೊಲೀಸರು ಇಬ್ಬರನ್ನೂ ಕೋರ್ಟ್ನ ಮುಂದೆ ಹಾಜರುಪಡಿಸಿದ್ದು, ಇಬ್ಬರೂ ಒಂದೇ ಮನೆಯಲ್ಲಿ ವಾಸ ಮಾಡಲು ಇಚ್ಛಿಸಿರುವುದಾಗಿ ಖುದ್ದು ಹೇಳಿಕೊಂಡ ಬಳಿಕ ಅವರನ್ನು ಅವರಿಚ್ಛೆಯಂತೆ ಬದುಕಲು ಬಿಡಲಾಗಿದೆ.
ಬೇರೆ ಬೇರೆ ಸಮುದಾಯಗಳಿಗೆ ಸೇರಿದ್ದ ಕಾರಣ ತಮ್ಮ ಪ್ರೇಮ ಸಲ್ಲಾಪವನ್ನು ಹೀಗೆ ಗುಟ್ಟಾಗಿ ಇಟ್ಟುಕೊಂಡಿದ್ದರು ಎಂದು ನೆನ್ಮಾರಾ ಪೊಲೀಸ್ ಠಾಣಾಧಿಕಾರಿ ದೀಪ ಕುಮಾರ್ ತಿಳಿಸಿದ್ದಾರೆ.
ಮನೆ ಬಿಟ್ಟು ಹೋದಾಗ ತನ್ನೊಂದಿಗೆ ಯಾವುದೇ ಮೊಬೈಲ್ ಇಟ್ಟುಕೊಳ್ಳದಿದ್ದ ಕಾರಣದಿಂದ ಸಜಿತಾರನ್ನು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಿತ್ತು. ತಮ್ಮೂರಿನ ಪಕ್ಕದೂರಿನಲ್ಲೇ ಚಿಕ್ಕದೊಂದು ಕೋಣೆ ಹಾಗೂ ಮನೆ ಮಾಡಿಕೊಂಡು, ಯಾರಿಗೂ ಗೊತ್ತಾಗದಂತೆ ಸಂಸಾರ ನಡೆಸುತ್ತಿದ್ದರು.
ರಹಮಾನ್ ಕೋಣೆಯೊಳಗೆ ಆಕೆಗೆ ಆಹಾರವನ್ನು ನೀಡುತ್ತಿದ್ದನು. ಪೋಷಕರನ್ನು ಹೊರತುಪಡಿಸಿ ರಹಮಾನ್ ಸಹೋದರಿ ಸಹ ಮನೆಯಲ್ಲಿ ವಾಸಿಸುತ್ತಿದ್ದರು. ಇನ್ನು ಸಜಿತಾ ಪೋಷಕರು 10 ವರ್ಷಗಳ ಹಿಂದೆ ಮಗಳು ಕಾಣೆಯಾಗಿದ್ದಾಳೆ ದೂರು ನೀಡಿದ್ದರು. ಈ ದೂರಿನನ್ವಯ ಆಗ ರಹಮಾನ್ ಸೇರಿದಂತೆ ಅನೇಕರನ್ನು ಪೊಲೀಸರು ಪ್ರಶ್ನಿಸಿದ್ದರು.
ಕೊನೆಗೆ 2021ರ ಮಾರ್ಚ್ 3ರಂದು ರಹಮಾನ್ ಕಾಣೆಯಾಗಿರುವುದಾಗಿ ಪೋಷಕರು ನೆನ್ಮಾರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ರಹಮಾನ್ ಪತ್ತೆ ಹಚ್ಚಿದ ಪೊಲೀಸರು ತಡೆದು ಠಾಣೆಗೆ ಕರೆದೊಯ್ದರು. ಈ ವೇಳೆ ತಾನು ಮತ್ತು ಸಜಿತಾ ಮೂರು ತಿಂಗಳಿನಿಂದ ವಿಥುನಾಶೇರಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವುದಾಗಿ ಎಂದು ಪೊಲೀಸರಿಗೆ ತಿಳಿಸಿದ್ದಾರೆ.