ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಇಟಿ (CET) ಕೌನ್ಸೆಲಿಂಗ್ನಲ್ಲಿ ಸೀಟ್ ಬ್ಲಾಕಿಂಗ್, ಹೆಚ್ಚು ಹಣ ನೀಡಿದವರಿಗೆ ಸೀಟು ನೀಡುವ ದಂಧೆಗಳು ನಡೆದಿದ್ದು ಕಂಡುಬಂದಿತ್ತು. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮುಂದಾಗಿದ್ದು, ಕಠಿಣ ಸೇರಿದಂತೆ ಕೆಲ ಹೊಸ ನಿಯಮಗಳನ್ನು ತರಲು ಮುಂದಾಗಿದೆ.
2023 ಮತ್ತು 2024ರ ಸಿಇಟಿ ಕೌನ್ಸೆಲಿಂಗ್ನಲ್ಲಿ ಸೀಟ್ ಬ್ಲಾಕಿಂಗ್ ಹಗರಣಗಳು ನಡೆದಿದ್ದವು. ಹಾಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಗಳಾದ ಸಿಇಟಿ, ನೀಟ್ ಮತ್ತು ಇತರ ನೇಮಕಾತಿ ಪರೀಕ್ಷೆಗಳಂತಹ ಪ್ರವೇಶ ಪರೀಕ್ಷೆಗಳಿಗೆ ಆಧಾರ್ ಆಧಾರಿತ ನೋಂದಣಿ ತರಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧರಿಸಿದೆ.
ಈ ಕುರಿತಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇ-ಆಡಳಿತ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಅನುಮೋದಿಸಿದ ನಂತರ 2025 ರಿಂದ ಎಲ್ಲಾ ಪರೀಕ್ಷೆಗಳಿಗೆ ಆಧಾರ್ ಆಧಾರಿತ ನೋಂದಣಿ ತರಲು ಪ್ರಾಧಿಕಾರ ನಿರ್ಧರಿಸಿದೆ. ಆದರೆ ಇದನ್ನು ಜಾರಿಗೆ ತರಲು ಕೆಲವು ನಿಯಮಗಳನ್ನು ತಿದ್ದುಪಡಿ ಮಾಡಬೇಕಾಗಿದೆ.
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿದ ತಕ್ಷಣ, ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಕಳುಹಿಸಲಾಗುತ್ತದೆ. ಈ ಒಟಿಪಿಯನ್ನು ನೇರವಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ (ಯುಐಡಿಎಐ) ಪಡೆಯಲಾಗುತ್ತದೆ. ಈ ಒಟಿಪಿಯನ್ನು ನಮೂದಿಸಿದ ನಂತರ ಅಪ್ಲಿಕೇಶನ್ ಮುಂದಿನ ಹಂತಕ್ಕೆ ಹೋಗುತ್ತದೆ. ಒಂದು ವೇಳೆ ತಪ್ಪಾದ ನಂಬರ್ ಹಾಕಿದ್ದಲ್ಲಿ ಅರ್ಜಿಯು ಮುಂದುವರಿಯುವುದಿಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್ ಪ್ರಸನ್ನ ಅವರು ತಿಳಿಸಿದ್ದಾರೆ.
ಇದು ವೃತ್ತಿಪರ ಕೋರ್ಸ್‌ಗಳಿಗೆ ಸೀಟು ಹಂಚಿಕೆಯಲ್ಲಿನ ಅಕ್ರಮಗಳನ್ನು ತಡೆಗಟ್ಟುವುದು ಮಾತ್ರವಲ್ಲದೆ, ನೇಮಕಾತಿ ಪರೀಕ್ಷೆಗಳಲ್ಲಿ ಬೆಳಕಿಗೆ ಬಂದಿರುವ ನಕಲಿ ಅರ್ಜಿಗಳು, ಪರೀಕ್ಷೆಗಳಲ್ಲಿನ ಇತರೆ ಅಕ್ರಮಗಳನ್ನು ತಡೆಯಲು ಸಹಾಯವಾಗಲಿದೆ ಎಂದಿದ್ದಾರೆ.
ಸಿಇಟಿ ಸೇರಿದಂತೆ ಇತರೆ ನೇಮಕಾತಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಹೆಚ್ಚಿನ ವಿದ್ಯಾರ್ಥಿಗಳು ಸೈಬರ್ ಕೆಫೆಗಳನ್ನು ಅವಲಂಬಿಸಿದ್ದಾರೆ. ಒಟಿಪಿ ಪಡೆಯಲು ಸೈಬರ್ ಕೇಂದ್ರದ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಅನೇಕ ಅರ್ಜಿಗಳನ್ನು ಸಲ್ಲಿಸುವುದು ಸಾಮಾನ್ಯವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಬಗ್ಗೆ ಅಗತ್ಯ ಮಾಹಿತಿ ಸಿಗುವುದಿಲ್ಲ. ಸೀಟ್ ಬ್ಲಾಕ್ ಮಾಡಲು ಈ ಸಂಖ್ಯೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿವೆ. ಹಾಗಾಗಿ ಆಧಾರ್ ಅನ್ನು ಕಡ್ಡಾಯಗೊಳಿಸುವ ಮೂಲಕ ಇದನ್ನು ತಡೆಯುವಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.